Breaking
24 Sep 2026, Thu

ಶಿರ್ಲಾಲಿನಲ್ಲಿ ಕಸ್ತೂರಿರಂಗನ್ ವರದಿ ವಿಶೇಷ ಗ್ರಾಮಸಭೆ: ಗ್ರಾಮಸ್ಥರಿಂದ ಆಕ್ಷೇಪಣೆ ಸಲ್ಲಿಕೆ

ಶಿರ್ಲಾಲು: ಇತ್ತೀಚೆಗೆ ಅಧಿಕಾರಿಗಳ ಗೈರುಹಾಜರಿಯಿಂದ ರದ್ದುಗೊಂಡು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದ್ದ ಕಸ್ತೂರಿರಂಗನ್ ವರದಿಗೆ ಸಂಬಂಧಿಸಿದ ವಿಶೇಷ ಗ್ರಾಮಸಭೆ ಸೆ.23ರಂದು ಶಿರ್ಲಾಲು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಪಂಚಾಯತ್ ಆಡಳಿತಾಧಿಕಾರಿ ಮಂಜುನಾಥ್ ವಹಿಸಿದ್ದರು. ವೇಣೂರು ವಲಯ ಸಹಾಯಕ ಅರಣ್ಯಾಧಿಕಾರಿ ಹರಿಪ್ರಸಾದ್, ಗ್ರಾಮಾಡಳಿತಾಧಿಕಾರಿ ವಿಜೇತ್ ಅಮೀನ್, ಗ್ರಾಮ ಪೊಲೀಸ್ ಅಧಿಕಾರಿ ಬೀರಪ್ಪ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೌರಿಶಂಕರ್ ಸಣಕಲ್ ಉಪಸ್ಥಿತರಿದ್ದರು.

ಸಭೆಯಲ್ಲಿ ಮಾತನಾಡಿದ ಗ್ರಾಮಸ್ಥ ಹಾಗೂ ತಾಲೂಕು ಕಸ್ತೂರಿರಂಗನ್ ವರದಿ ವಿರೋಧಿ ಹೋರಾಟ ಸಮಿತಿಯ ಸಹ ಸಂಚಾಲಕ ಎಂ.ಕೆ. ಪ್ರಸಾದ್, ಗ್ರಾಮದ ಭೌಗೋಳಿಕ ಹಾಗೂ ವಾಸ್ತವಿಕ ಪರಿಸ್ಥಿತಿಯನ್ನು ಪರಿಗಣಿಸದೆ ಯಾವುದೇ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಗೆ ಸೇರಿಸಬಾರದು ಎಂದು ಒತ್ತಾಯಿಸಿದರು. ಕೃಷಿ ಚಟುವಟಿಕೆ, ಮನೆ ನಿರ್ಮಾಣ, ರಸ್ತೆ, ಸೇತುವೆ, ವಿದ್ಯುತ್, ಶಾಲೆ, ಆಸ್ಪತ್ರೆ ಸೇರಿದಂತೆ ಗ್ರಾಮದ ಅಭಿವೃದ್ಧಿಗೆ ಯಾವುದೇ ರೀತಿಯಲ್ಲಿ ಅಡ್ಡಿಯಾಗಬಾರದು ಎಂದು ಅವರು ಹೇಳಿದರು.

ವಿಶ್ವನಾಥ ಬಂಗೇರ ಮಾತನಾಡಿ, ಗ್ರಾಮದ ಒಂದೇ ಒಂದು ಮನೆಯಿಗೂ ಸಮಸ್ಯೆಯಾಗುವ ಪರಿಸ್ಥಿತಿ ನಿರ್ಮಾಣವಾದರೂ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು. ಮಾಧವ ಶಿರ್ಲಾಲು ಅವರು ಕಸ್ತೂರಿರಂಗನ್ ವರದಿಯನ್ನು ತಿರಸ್ಕರಿಸುವಂತೆ ಒತ್ತಾಯಿಸಿದರು.

ಚಿದಾನಂದ ಎಲ್ದಕ್ಕ ಮಾತನಾಡಿ, ಕಸ್ತೂರಿರಂಗನ್ ವರದಿಯ ಕುರಿತು ಗ್ರಾಮಸ್ಥರಿಗೆ ಸಮರ್ಪಕ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು. ಹರ್ಷ ಆರ್. ಜೈನ್ ಮಾತನಾಡಿ, ಅರಣ್ಯ ಪ್ರದೇಶದಲ್ಲಿ ದೀರ್ಘಕಾಲದಿಂದ ವಾಸಿಸುತ್ತಿರುವ ಜನರ ಹಿತಾಸಕ್ತಿಯನ್ನು ಕಾಪಾಡುವ ಅಗತ್ಯವಿದೆ ಎಂದರು.

ರಮಾನಂದ ಗುಡ್ಡಾಜೆ ಅವರು ಅರಣ್ಯ ಹಾಗೂ ಪರಂಬೋಕು ಪ್ರದೇಶಗಳಲ್ಲಿ ಜೀವನ ಕಟ್ಟಿಕೊಂಡಿರುವ ಜನರ ಹಿತಾಸಕ್ತಿಯನ್ನು ಜನಪ್ರತಿನಿಧಿಗಳು ಕಾಪಾಡಬೇಕು ಎಂದು ಹೇಳಿದರು.

ಸಭೆಯಲ್ಲಿ ಜಗನ್ನಾಥ ಅಂತ್ರಾಂಗೆ, ರಮೇಶ್ ಮಜಲಪಲ್ಕೆ ಸೇರಿದಂತೆ ಹಲವರು ತಮ್ಮ ಅಭಿಪ್ರಾಯ ಹಾಗೂ ಆಕ್ಷೇಪಣೆಗಳನ್ನು ವ್ಯಕ್ತಪಡಿಸಿದರು.

ವೇಣೂರು ವಲಯ ಸಹಾಯಕ ಅರಣ್ಯಾಧಿಕಾರಿ ಹರಿಪ್ರಸಾದ್ ಅವರು ಕಸ್ತೂರಿರಂಗನ್ ವರದಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆಗಳ ಕುರಿತು ಸಭೆಗೆ ಮಾಹಿತಿ ನೀಡಿದರು. ಬಳಿಕ ಗ್ರಾಮಸ್ಥರಿಂದ ಅಹವಾಲು ಹಾಗೂ ಆಕ್ಷೇಪಣೆಗಳನ್ನು ಸ್ವೀಕರಿಸಲಾಯಿತು.

ಶಿರ್ಲಾಲು ಪಂಚಾಯತ್ ಕಾರ್ಯದರ್ಶಿ ಮೋನಮ್ಮ ಸ್ವಾಗತಿಸಿದರು. ಸಿಬ್ಬಂದಿ ಪವಿತಾ ವಂದಿಸಿದರು.

Leave a Reply

Your email address will not be published. Required fields are marked *