Breaking
22 Mar 2026, Sun

ಬೆಳ್ತಂಗಡಿಯ ಮಲವಂತಿಗೆಯಲ್ಲಿ ಒಕ್ಕೆಲಬ್ಬಿಸಿದ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಅಧಿಕಾರಿಗಳು

ಬೆಳ್ತಂಗಡಿ: ಕುದುರೇಮುಖ ರಾಷ್ಟ್ರೀಯ ಉದ್ಯಾನವನದಿಂದ ಒಕ್ಕಲೆಬ್ಬಿಸುವ ಪ್ರಕ್ರಿಯೆಗೆ ಅರಣ್ಯ ಇಲಾಖೆ ಮುಂದಾಗಿದ್ದು ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಕುದುರೇಮುಖ ರಾಷ್ಟ್ರೀಯ ಉದ್ಯಾನವನದೊಳಗೆ ಅರಸಿನಮಕ್ಕಿ ಎಂಬಲ್ಲಿನ ನಿವಾಸಿ ಪಿ.ಟಿ ಜೋಸೆಫ್ ಎಂಬವರನ್ನು ಅ31ರಂದು ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಅಧಿಕಾರಿಗಳು ಒಕ್ಕೆಲಬ್ಬಿಸಿದ್ದು ಅವರ ಕೃಷಿಯನ್ನು ಸಂಪೂರ್ಣ ವಾಗಿ ನಾಶ ಪಡಿಸಿ ಇಲ್ಲಿ ಅರಣ್ಯ ಗಿಡಗಳನ್ನು ನೆಟ್ಟಿದ್ದಾರೆ.

ಕಳೆದ ಐದು ದಶಕದಿಂದಲೂ ಇಲ್ಲಿ ವಾಸಿಸುತ್ತಿದ್ದ ಕುಟುಂಬಕ್ಕೆ ನೀಡಲಾಗಿದ್ದ ಹಕ್ಕು ಪತ್ರವನ್ನು ರದ್ದುಪಡಿಸಿದ ಅರಣ್ಯ ಇಲಾಖೆ ಇದೀಗ ಯಾವುದೇ ಕನಿಷ್ಟ ಪರಿಹಾರನ್ನೂ ನೀಡಿದೆ ಏಕಾಏಕಿ ಒಕ್ಕಲೆಬ್ಬಿಸಿ ಅವರ ಮನೆ ಹಾಗೂ ಕೃಷಿ ಭೂಮಿಯಿಂದ ಹೊರಗೆ ಕಳುಹಿಸಿದ್ದು ಬೇರೆ ಜಮೀನಾಗಲಿ ಮನೆಯಾಗಲಿ ಇಲ್ಲದ ಈ ಕುಟುಂಬ ಅಕ್ಷರಶ ಬೀದಿಪಾಲಾದಂತಾಗಿದೆ ಇವರು ಕಳೆದ 50ವರ್ಷಗಳಿಂದ ಬದುಕಿದ್ದ ಮನೆಯನ್ನು ನಾಶಪಡಿಸಲಾಗಿದ್ದು ಸುಮಾರು ಎರಡು ಎಕ್ರೆ ಜಾಗದಲ್ಲಿದ್ದ ಫಲಕೊಡುವ ಅಡಿಕೆ ಮರಗಳನ್ನು ತೆಂಗಿನ ಮರಗಳನ್ನು ಹಾಗೂ ಇತರ ಕೃಷಿಯನ್ನು ಪೂರ್ಣ ಕಡಿದುರುಳಿಸಲಾಗಿದ್ದು ಅರಣ್ಯ ಇಲಾಖೆಯ ಬೋರ್ಡ್ ಅಳವಡಿಸಲಾಗಿದೆ.

1970 ರ ಸುಮಾರಿಗೆ ಪಿಟಿ ಜೋಸೆಫ್ ಅವರ ತಂದೆ ಇಲ್ಲಿ ಬಂದು ನೆಲೆಸಿದ್ದು 1997ರಲ್ಲಿ ಇವರಿಗೆ ರಾಜ್ಯ ಸರಕಾರ ಅಕ್ರಮ ಸಕ್ರಮ ಕಾನೂನಿನ ಅಡಿಯಲ್ಲಿ 4.90 ಎಕ್ರೆ ಜಮೀನಿಗೆ ಹಕ್ಕು ಪತ್ರವನ್ನೂ ನೀಡಿತ್ತು. ಯಾವಾಗ ಕುದಯರೇ ಮುಖ ರಾಷ್ಟ್ರೀಯ ಉದ್ಯಾನವನ ಘೋಷಣೆಯಾಯಿತೋ ಅದರೊಂದಿಗೆ ಈ ಕುಟುಂಬಕ್ಕೆ ಸಂಕಷ್ಟಗಳೂ ಆರಂಭವಾಯಿತು. 2004ರಲ್ಲಿ ಇವರ ಹಕ್ಕು ಪತ್ರವನ್ನು ರದ್ದು ಪಡಿಸಲಾಯಿತು. ಈ ವೇಳೆಗೆ ಕುದುರೇಮುಖ ರಾಷ್ಟ್ರೀಯ ಉದ್ಯಾನವನದ ಭಾಗಗಳಲ್ಲಿ ನಕ್ಸಲ್ ಸಮಸ್ಯೆ ತೀವ್ರವಾಗಿದ್ದು ಸರಕಾರ ಯಾರನ್ನೂ ಬಲವಂತವಾಗಿ ಒಕ್ಕಲೆಬ್ಬಿಸುವುದಿಲ್ಲ ಎಂಬ ಭರವಸೆಯನ್ನು ನೀಡಿತ್ತು. ಆದರೆ 2014ರಲ್ಲಿ ಅರಣ್ಯ ಇಲಾಖೆ ಜೋಸೆಫ್ ಅವರಿಗೆ ಮತ್ತೆ ನೋಟೀಸ್ ನೀಡಿ ಒಕ್ಕಲೇಳುವಂತೆ ಸೂಚಿಸಿತ್ತು. ಇದರ ವಿರುದ್ದ ಅವರು ಅರಣ್ಯ ಇಲಾಖೆಯಲ್ಲಿ ಸಲ್ಲಿಸಿದ್ದ ಮೇಲ್ಮನವಿಗಳು ತಿರಸ್ಕಾರಗೊಂಡಿತ್ತು. ಇವರಿಗೆ ಒಕ್ಕಲೇಳು ವಂತೆ ಅ11ರಂದು ಅಂತಿಮ ನೋಟೀಸ್ ನೀಡಿ ಅ30 ರೊಳಗೆ ಸ್ಥಳ ಬಿಟ್ಟು ತೆರಳುವಂತೆ ಸೂಚಿಸಿತ್ತು. ಇದೀಗ ಅ 31ರಂದು ಪೊಲೀಸ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ಸಹಕಾರದಿಂದಿಗೆ ಆಗಮಿಸಿದ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ಶರ್ಮಿಷ್ಠ ನೇತೃತ್ವದ ತಂಡ ಕೃಷಿಯನ್ನು ಹಾಗೂ ಮನೆಯನ್ನು ಸಂಪೂರ್ಣವಾಗಿ ನಾಶಪಡಿಸಿ ಒಕ್ಕಲೆಬ್ಬಿಸುವಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ.

ಕೆಲವು ವರ್ಷಗಳ ಹಿಂದೆ ಅರಣ್ಯ ಇಲಾಖೆಯ ಅಧಿಕಾರಿಗಳು ಜೋಸೆಫ್ ಅವರ ಜಮೀನಿನಲ್ಲಿ ಇದ್ದ 400ಕ್ಕೂ ಅಧಿಕ ರಬ್ಬರ್ ಮರಗಳನ್ನು ಕಡಿದು ಜಾಗವನ್ನು ವಶಕ್ಕೆ ಪಡೆಸುಕೊಂಡಿದ್ದರು. ಈ ಜಾಗವನ್ನು ಇಲಾಖೆ ವಶಕ್ಕೆ ತೆಗೆದುಕೊಂಡು ಉಳಿದ ಜಾಗವನ್ನು ಕುಟುಂಬಕ್ಕೆ ನೀಡಿರುವುದಾಗಿ ಅಂದು ಅಧಿಕಾರಿಗಳು ತಿಳಿಸಿದ್ದರು ಆದರೆ ಈಗ ಅಂತಹ ಯಾವುದೇ ದಾಖಲೆಗಳು ಅರಣ್ಯ ಇಲಾಖೆಯ ಬಳಿ ಇಲ್ಲ ಎನ್ನುತ್ತಿದ್ದಾರೆ ಅಧಿಕಾರಿಗಳು.

Leave a Reply

Your email address will not be published. Required fields are marked *