ನವದೆಹಲಿ: ಹಬ್ಬ ಹರಿದಿನಗಳಲ್ಲಿ ಆಹಾರ ಪದಾರ್ಥಗಳ ದುಬಾರಿ ಬೆಲೆಯಿಂದ ಜನಸಾಮಾನ್ಯರು ಪರದಾಡುವಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರವು ಹಣದುಬ್ಬರದಿಂದ ಸಾಮಾನ್ಯ ಜನರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ದೊಡ್ಡ ಘೋಷಣೆ ಮಾಡಿದೆ.
ದೀಪಾವಳಿಗೂ ಮುನ್ನ ದೇಶದ ಸಾಮಾನ್ಯರಿಗೆ ಹಿಟ್ಟು, ಅಕ್ಕಿ, ಬೇಳೆಕಾಳುಗಳನ್ನು ಅಗ್ಗದ ದರದಲ್ಲಿ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಘೋಷಿಸಿದ್ದು, ಸರ್ಕಾರದ ಪ್ರಕಾರ, ಭಾರತ್ ಬ್ರಾಂಡ್ ಯೋಜನೆಯ 2ನೇ ಹಂತವನ್ನು ಅಕ್ಟೋಬರ್ 23ರ ಬುಧವಾರದಿಂದ ಪ್ರಾರಂಭಿಸಲಾಗಿದೆ.
ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಕಳೆದ ವರ್ಷ ಈ ಯೋಜನೆಯನ್ನು ಪ್ರಾರಂಭಿಸಿತ್ತು. ಭಾರತ್ ಬ್ರಾಂಡ್ ಯೋಜನೆಯಡಿ, ಕೇಂದ್ರ ಸರ್ಕಾರವು ಹಿಟ್ಟು, ಅಕ್ಕಿ ಮತ್ತು ಕಾಳುಗಳನ್ನು ಅಗ್ಗದ ಬೆಲೆಗೆ ಮಾರಾಟ ಮಾಡುತ್ತಿದೆ.
ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ 2ನೇ ಹಂತದ ಯೋಜನೆಯನ್ನು ಉದ್ಘಾಟಿಸಿದರು . ಆಹಾರ ಸಚಿವಾಲಯದ ಏಜೆನ್ಸಿಯಾದ ಎನ್‌ಸಿಸಿಎಫ್ ಯೋಜನೆಯಡಿ, ದೆಹಲಿ, ರಾಜಸ್ಥಾನ, ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಅಗ್ಗದ ದರದಲ್ಲಿ ಹಿಟ್ಟು, ಅಕ್ಕಿ ಮತ್ತು ಬೇಳೆಕಾಳುಗಳ ಮಾರಾಟವನ್ನು ಮೊದಲು ಪ್ರಾರಂಭಿಸಲಾಗುವುದು. ನಂತರ ಮುಂದಿನ 10 ದಿನಗಳಲ್ಲಿ ದೇಶದಾದ್ಯಂತ ಅಗ್ಗದ ಹಿಟ್ಟು, ಅಕ್ಕಿ ಮತ್ತು ಬೇಳೆಕಾಳುಗಳ ಮಾರಾಟ ಪ್ರಾರಂಭವಾಗಲಿದೆ. ವರದಿಯ ಪ್ರಕಾರ, ಎನ್‌ಸಿಸಿಎಫ್ ಜೊತೆಗೆ ಅಗ್ಗದ ಹಿಟ್ಟು, ಅಕ್ಕಿ ಮತ್ತು ಬೇಳೆಕಾಳುಗಳನ್ನು ಸಹ ನಾಫೆಡ್ ಮತ್ತು ಕೇಂದ್ರೀಯ ಭಂಡಾರ್ ಮೂಲಕ ಮಾರಾಟ ಮಾಡಲಾಗುತ್ತದೆ. ಇದರೊಂದಿಗೆ ಈ ಆಹಾರ ಪದಾರ್ಥಗಳ ಮಾರಾಟಕ್ಕಾಗಿ ಸರ್ಕಾರವು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಮತ್ತು ಚಿಲ್ಲರೆ ವ್ಯಾಪಾರಿಗಳೊಂದಿಗೆ ಮಾತುಕತೆ ನಡೆಸುತ್ತಿದೆ.
ಭಾರತ್ ಬ್ರಾಂಡ್‌ನ 2ನೇ ಹಂತದಲ್ಲಿ 10 ಕೆಜಿ ಹಿಟ್ಟಿನ ಪ್ಯಾಕೆಟ್‌ಗೆ 300 ರೂ., 10 ಕೆಜಿ ಅಕ್ಕಿ ಪ್ಯಾಕೆಟ್‌ಗೆ 340 ರೂ., 1 ಕೆಜಿ ಚನಾ ದಾಲ್‌ಗೆ 70 ರೂ., 1 ಕೆಜಿ ಮೂಂಗ್ ದಾಲ್‌ಗೆ 93 ರೂ. ಮತ್ತು 1 ಕೆಜಿ ಮಸೂರ್ ದಾಲ್‌ಗೆ 89 ರೂ. ನಿಗದಿಪಡಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.