Breaking
23 Mar 2026, Mon

ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಯೋಜನೆಯಲ್ಲಿ ಸಬ್ಸಿಡಿ ಸಾಲ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ವಂಚನೆ, ಮಹಿಳೆಯ ಬಂಧನ

ಉಡುಪಿ: ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಯೋಜನೆಯಲ್ಲಿ ಸಬ್ಸಿಡಿ ಸಾಲ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣದಲ್ಲಿ ಆರೋಪಿ ಮಹಿಳೆಯೊಬ್ಬರನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ.

ಬ್ರಹ್ಮಾವರ ತಾಲೂಕಿನ ಆರೂರು ಗ್ರಾಮದ ಕೌಶಲ್ಯ ಬಂಧಿತ ಆರೋಪಿಯಾಗಿದ್ದಾಳೆ.

ಈಕೆ 2023ರ ನವೆಂಬರ್ ನಲ್ಲಿ ಬಾರಕೂರು ಹೇರಾಡಿಯ ಸರಿತಾ ಲೂವಿಸ್ ಎಂಬವರಿಗೆ ಪಿಎಂಇಜಿಪಿ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ಹೇಳಿದ್ದು ನಂತರದ ದಿನಗಳಲ್ಲಿ ಸಬ್ಸಿಡಿ ಲೋನ್ ಬಗ್ಗೆ ಹಲವಾರು ಕಾರಣಗಳನ್ನು ತಿಳಿಸಿ ಹಣ ಪಾವತಿಸುವಂತೆ ತಿಳಿಸಿದ್ದಳು. ಅದರಂತೆ ಸರಿತಾ ಲೂವಿಸ್ ಹಂತ ಹಂತವಾಗಿ ಕೌಶಲ್ಯಳ ಖಾತೆಗೆ ಹಾಗೂ ಆಕೆಯ ತಿಳಿಸಿದ ವ್ಯಕ್ತಿಗಳಾದ ಆಕೆಯ ಗಂಡ ಸಂದೇಶ ಮತ್ತು ಪ್ರಕಾಶ, ಆಶೀಶ ಶೆಟ್ಟಿ, ರಾಜೇಂದ್ರ ಬೈಂದೂರು, ಗೀತ, ಹರಿಣಿ, ನವ್ಯ, ಕುಮಾರ್, ಮಾಲತಿ, ಪ್ರವೀಣ್, ಹರಿಪ್ರಸಾದ್, ನಾಗರಾಜ ಮತ್ತು ಭಾರತಿ ಸಿಂಗ್ ಎಂಬವರಿಗೆ ಒಟ್ಟು 80,72,000ರೂ. ಹಣ ನೀಡಿದ್ದರು ಎಂದು ದೂರಲಾಗಿದೆ.

ಅದೇ ರೀತಿ ಕೌಶಲ್ಯ, ಅಂಜಲಿನ್ ಡಿಸಿಲ್ವಾ ಎಂಬವರಿಗೂ ಪಿಎಂಇಜಿಪಿ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ಹೇಳಿ ಹಂತ ಹಂತವಾಗಿ ಸರಿತಾ ಲೂವಿಸ್ ಗೆ ತಿಳಿಸಿದ ವ್ಯಕ್ತಿಗಳ ಖಾತೆಗಳಿಗೆ 65,00,000ರೂ. ನಗದು ಹಣವನ್ನು ಪಾವತಿಸಿದ್ದರು.

ಕೌಶಲ್ಯ ಇವರಿಬ್ಬರಿಗೆ ಒಟ್ಟು 4 ಕೋಟಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಹಾಗೂ ಬ್ಯಾಂಕ್ ನೌಕರ ಎಂದು ಪೋನ್ ನಲ್ಲಿ ಮಾತನಾಡಿ ನಂಬಿಸಿ ಒಟ್ಟು 1,45,72,000ರೂ. ಹಣ ಪಡೆದು ಮೋಸ ಮಾಡಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.

ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

Leave a Reply

Your email address will not be published. Required fields are marked *