Breaking
23 Jun 2026, Tue

ನಕಲಿ ಖಾತೆಗಳಿಂದ ಸಚಿವರ ವಿರುದ್ಧ ಅವಹೇಳನ ಆರೋಪ ಮುರುಡೇಶ್ವರದಲ್ಲಿ ವ್ಯಕ್ತಿಯ ಬಂಧನ

ಮುರುಡೇಶ್ವರ: ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆಗಳನ್ನು ಬಳಸಿ ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯರ ವಿರುದ್ಧ ಅವಹೇಳನಕಾರಿ ವಿಡಿಯೋ ಹಾಗೂ ಪೋಸ್ಟ್ ಗಳನ್ನು ಹಂಚಿದ ಪ್ರಕರಣದಲ್ಲಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಭಟ್ಕಳ ತಾಲೂಕಿನ ಬೈಲೂರು ದೊಡ್ಡಬಲಸೆಯ ಪುರಂದರ ಮಂಜುನಾಥ ನಾಯ್ಕ (37) ಬಂಧಿತ ಆರೋಪಿಯಾಗಿದ್ದಾನೆ.

ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಆರೋಪಿಯು ತೇಜು ನಾಯ್ಕ ಹೊನ್ನಾವರ ಮತ್ತು ವಂದನಾ ಪೂಜಾರಿ ಎಂಬ ನಕಲಿ ಫೇಸ್ಬುಕ್ ಖಾತೆಗಳ ಮೂಲಕ ಈ ಪೋಸ್ಟ್ಗಳನ್ನು ಹಂಚುತ್ತಿದ್ದಾನೆ. ಕಳೆದ ಮೇ 29, 2025 ರಂದು ಮಂಜುನಾಥ ನಾಯ್ಕ ಅವರೇ ತಮ್ಮ ವಿರುದ್ಧ ಅಸಭ್ಯ ಶಬ್ದಗಳಲ್ಲಿ ಪೋಸ್ಟ್ ಮಾಡಲಾಗಿದೆ ಎಂದು ದೂರು ನೀಡಿದ್ದರು. ಬಳಿಕ ತನಿಖೆಯ ಸಮಯದಲ್ಲಿ, ಇದೇ ಖಾತೆಗಳಿಂದ ಜೂನ್ 6, 2025 ರಂದು ಸಚಿವ ಮಂಕಾಳ್ ವೈದ್ಯರ ವಿರುದ್ಧ ಸುಮಾರು 1.29 ನಿಮಿಷಗಳ ವಿಡಿಯೋ ಹಂಚಲಾಗಿರುವುದು ಪತ್ತೆಯಾಯಿತು.

ಈ ಕುರಿತು ನಾಗಪ್ಪ ನಾಯ್ಕ ಎಂಬವರು ಪೊಲೀಸರಿಗೆ ಮಾಹಿತಿ ನೀಡಿದ ನಂತರ, ಪೊಲೀಸರು ತಾಂತ್ರಿಕ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಆರೋಪಿಯನ್ನು ಬಂಧಿಸಿದ್ದಾರೆ. ಪೊಲೀಸರು ಎರಡು ಮೊಬೈಲ್ ಫೋನ್‌ಗಳು ಸೇರಿದಂತೆ ಸಾಕ್ಷ್ಯಾಧಾರಗಳನ್ನು ವಶಪಡಿಸಿಕೊಂಡಿದ್ದಾರೆ.

ಮೂಲಗಳ ಪ್ರಕಾರ, ಆರೋಪಿಯ ನಕಲಿ ಖಾತೆಗಳಲ್ಲಿ ಸಚಿವರ ವಿರುದ್ಧ ನಿಂದನೆ ಮಾಡುವುದರ ಜೊತೆಗೆ, ಉದ್ಯಮಿ ಹಾಗೂ ಯಂಗ್ ಒನ್ ಇಂಡಿಯಾ ಮಾಲಕ ಮಾಸ್ತಪ್ಪ ನಾಯ್ಕ ಅವರನ್ನು ಹೊಗಳುವ ರೀತಿಯಲ್ಲಿಯೂ ಪೋಸ್ಟ್ ಗಳನ್ನು ಮಾಡಲಾಗಿದ್ದವು.

ಪೊಲೀಸರು ಈ ಕೃತ್ಯದ ಹಿಂದೆ ಇನ್ನೂ ಯಾರಾದರೂ ಪ್ರೇರಕ ಶಕ್ತಿ ಅಥವಾ ಕಾಣದ ಕೈ ಇದ್ದಿರಬಹುದೇ ಎಂಬ ಅನುಮಾನದಿಂದ ತನಿಖೆಯನ್ನು ವಿಸ್ತರಿಸಿದ್ದಾರೆ.

ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣದ ದಾಖಲಾಗಿದ್ದು ತನಿಖೆ ಮುಂದುವರೆಸಿದ್ದಾರೆ.

Leave a Reply

Your email address will not be published. Required fields are marked *