ಆಂಧ್ರಪ್ರದೇಶ: ಬಸ್ಸೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಬಳಿಕ ಬೆಂಕಿ ಹೊತ್ತಿಕೊಂಡು ಕನಿಷ್ಠ 11 ಮಂದಿ ಪ್ರಯಾಣಿಕರು ದಾರುಣವಾಗಿ ಸಾವನ್ನಪ್ಪಿದ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಚಿನ್ನೇಟಕೂರ್ ಬಳಿ ಅ.24 ರಂದು ಬೆಳಗ್ಗಿನ ವೇಳೆ ನಡೆದಿದೆ.


ಪ್ರಾಥಮಿಕ ವರದಿಗಳ ಪ್ರಕಾರ ಬಸ್ ನಲ್ಲಿ ಸುಮಾರು 40 ಪ್ರಯಾಣಿಕರಿದ್ದರು. ಈ ಪೈಕಿ 18 ಪ್ರಯಾಣಿಕರನ್ನು ಜೀವಂತವಾಗಿದ್ದು, 10 ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.ಶವಗಳು ಸಂಪೂರ್ಣವಾಗಿ ಸುಟ್ಟುಹೋಗಿದ್ದು, ಗುರುತಿಸುವುದೂ ಕಷ್ಟಕರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಧಿಕೃತ ಮೂಲಗಳ ಪ್ರಕಾರ, ಈ ಘಟನೆ ಬೆಳಗಿನ ಜಾವ 3:30 ರ ಸುಮಾರಿಗೆ ಸಂಭವಿಸಿದ್ದು, ಬಸ್ ದ್ವಿಚಕ್ರ ವಾಹನ ಢಿಕ್ಕಿ ಹೊಡೆದ ಪರಿಣಾಮ ಏಕಾಏಕಿ ಭಾರಿ ಬೆಂಕಿ ಹೊತ್ತಿಕೊಂಡಿದ್ದು, ಅದು ಕ್ಷಣಾರ್ಧದಲ್ಲಿ ಇಡೀ ಬಸ್ಸನ್ನು ಆವರಿಸಿಕೊಂಡಿದೆ.

ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ಮೊದಲು ಬಸ್ ನ ಮುಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡು ನಂತರ ವೇಗವಾಗಿ ಪಸರಿಸಿದೆ. ಬೆಂಕಿಯ ತೀವ್ರತೆ ಹೆಚ್ಚುತ್ತಿದ್ದಂತೆ, 12 ಪ್ರಯಾಣಿಕರು ತುರ್ತು ನಿರ್ಗಮನ ದ್ವಾರವನ್ನು ಮುರಿದು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಕರ್ನೂಲ್ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತ ಸಂಭವಿಸುವ ಮುನ್ನ ಪ್ರದೇಶದಲ್ಲಿ ಭಾರೀ ಮಳೆಯಾಗಿರುವುದಾಗಿ ವರದಿಯಾಗಿದ್ದು, ಅದು ಅಪಘಾತಕ್ಕೆ ಕಾರಣವಾಗಿರಬಹುದು ಎನ್ನಲಾಗಿದೆ. ಬಸ್ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಬೆಂಕಿಗೆ ಕಾರಣವನ್ನು ಪತ್ತೆ ಹಚ್ಚಲು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.


