ಕೋಲಾರ: ಜಾತಿ ಗಣತಿ ಸಮೀಕ್ಷೆಗೆ ತೆರಳಿ ನಾಪತ್ತೆಯಾಗಿದ್ದ ಶಿಕ್ಷಕಿಯೊಬ್ಬರು ಶವವಾಗಿ ಪತ್ತೆಯಾದ ಘಟನೆ ಕೋಲಾರ ಕೆಜಿಎಫ್ ತಾಲೂಕಿನ ಐಪಲ್ಲಿ ಕೆರೆಯಲ್ಲಿ ನಡೆದಿದೆ.

ಕೋಲಾರದ ಮಹಾಲಕ್ಷ್ಮಿ ಬಡವಾಣೆಯ ನಿವಾಸಿ, ತಾಲೂಕಿನ ಬಿ ಹೊಸಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕಿಯಾಗಿದ್ದ ಅಖ್ತರ್ ಬೇಗಂ ಮೃತಪಟ್ಟ ಮಹಿಳೆಯಾಗಿದ್ದಾರೆ. ಇವರು ನರಸಾಪುರದಲ್ಲಿ ಸಮೀಕ್ಷೆ ಕಾರ್ಯ ನಡೆಸಿದ ಬಳಿಕ ನಾಪತ್ತೆಯಾಗಿದ್ದರು.

ಎರಡು ದಿನಗಳಿಂದ ನಾಪತ್ತೆಯಾಗಿದ್ದ ಶಿಕ್ಷಕಿಯ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಈ ಸಂಬಂಧ ಕೋಲಾರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ಅನುಮಾನ ವ್ಯಕ್ತವಾಗುತ್ತಿದೆ.

ಇವರು ಜಾತಿ ಗಣತಿ ಸಮೀಕ್ಷೆಯನ್ನು ಪೂರ್ಣಗೊಳಿಸಲು ಒತ್ತಡದ ಕಾರಣದಿಂದ ಮಾನಸಿಕವಾಗಿ ಸಮಸ್ಯೆ ಎದುರಿಸುತ್ತಿದ್ದರು ಎಂದು ಮೂಲಗಳು ಹೇಳಿವೆ. ಇದು ಸಮೀಕ್ಷೆಯಲ್ಲಿ ತೊಡಗಿರುವ ಶಿಕ್ಷಕರಲ್ಲಿ ಸುರಕ್ಷತೆಯ ಬಗ್ಗೆ ಭೀತಿ ಉಂಟು ಮಾಡಿದೆ.


