Breaking
23 Mar 2026, Mon

ರಾಜ್ಯದ ಬೇರೆ ಭಾಗಗಳಲ್ಲೂ ಕಂಬಳ ಆಯೋಜನೆಗೆ ಸರಕಾರ ತೀರ್ಮಾನಿಸಬಹುದು : ಹೈಕೋರ್ಟ್‌

ಮಂಗಳೂರು : ಕರಾವಳಿ ಜಿಲ್ಲೆಗಳನ್ನು ಹೊರತುಪಡಿಸಿ, ರಾಜ್ಯದ ಬೇರೆ ಭಾಗಗಳಲ್ಲೂ ಕಂಬಳ ಆಯೋಜನೆ ಸಂಬಂಧ ಕಾನೂನು-ನಿಯಮಗಳ ರೀತಿ ರಾಜ್ಯ ಸರಕಾರ ತೀರ್ಮಾನಿಸಬಹುದು ಎಂದು ಹೈಕೋರ್ಟ್‌ ಮೌಖಿಕವಾಗಿ ಹೇಳಿದೆ.

ದಕ್ಷಿಣ ಮತ್ತು ಉಡುಪಿ ಜಿಲ್ಲೆಗಳಲ್ಲಿ ಶತಮಾನಗಳಿಂದ ನಡೆಸಿಕೊಂಡು ಬರಲಾಗುತ್ತಿರುವ ಪಾರಂಪರಿಕ ಸಂಪ್ರದಾಯವಾಗಿರುವ ಕಂಬಳ ಕ್ರೀಡೆಯನ್ನು ರಾ‍ಜ್ಯದ ಬೇರೆ ಜಿಲ್ಲೆ ಅಥವಾ ಭಾಗಗಳಲ್ಲಿ ಆಯೋಜನೆ ಮಾಡುವುದನ್ನು ನಿರ್ಬಂಧಿಸಲು ಸರಕಾರಕ್ಕೆ ನಿರ್ದೇಶಿಸಬೇಕು. ಜತೆಗೆ, ಪಿಲಿಕುಳ ಜೈವಿಕ ಉದ್ಯಾನವನದ (ನಿಸರ್ಗಧಾಮ) ಬಳಿ ಕಂಬಳ ಆಯೋಜನೆಗೆ ಅನುಮತಿ ನೀಡಬಾರದು ಎಂದು ಕೋರಿ ‘ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್’ (ಪೆಟಾ) ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಅ.14ರಂದು ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ರಾಜ್ಯದ ನಿರ್ದಿಷ್ಟ ಭೌಗೋಳಿಕ ಪ್ರದೇಶ ಅಥವಾ ಕೆಲ ಜಿಲ್ಲೆಗಳ ಆಚರಣೆ, ಸಂಪ್ರದಾಯಗಳು ಇಡೀ ರಾಜ್ಯದ ಸಂಪ್ರದಾಯವಾಗಿರುತ್ತದೆ. ನಿರ್ದಿಷ್ಟ ಸಂಪ್ರದಾಯಗಳನ್ನು ಆಚರಿಸಲಾಗುವ ಕರ್ನಾಟಕದ ಭಾಗಗಳನ್ನು ರಾಜ್ಯಕ್ಕೆ ಸೇರಿದ್ದಲ್ಲ ಎನ್ನಲಾಗುತ್ತದೆಯೇ? ಹಾಗೆ ಹೇಳಿದ್ದಲ್ಲಿ ಅದು ವಿಭಜಕ ಭಾವನೆ ಆಗಬಹುದು ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್ ಇದರ ಬಗ್ಗೆ ವಿವರವಾದ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದೆ.

ಈ ಕುರಿತು ಕಂಬಳ ಅಸೋಸಿಯೇಶನ್ ಅಧ್ಯಕ್ಷ ಬೆಳಪು ಡಾ.ದೇವಿ ಪ್ರಸಾದ್ ಶೆಟ್ಟಿ ಸಂತಸ ವ್ಯಕ್ತಪಡಿಸಿ, ಇದು ನಮ್ಮ ಹೋರಾಟಕ್ಕೆ ಸಂದ ಜಯ. ಸಾಗಾಟದ ವೇಳೆ ಕೋಣಗಳಿಗೆ ಹಿಂಸೆಯಾಗುತ್ತದೆ ಎಂದು ಪೇಟಾ ಪರ ವಕೀಲರು ನ್ಯಾಯಾಲಯದಲ್ಲಿ ವಾದಿಸಿದ್ದರು. ಆದರೂ ಆಯಾ ಕಂಬಳಗಳ ಸಮಿತಿಯವರ ಹೋರಾಟ ಫಲ ನೀಡಿದೆ. ಜಿಲ್ಲೆಯ ಕಂಬಳವು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುತ್ತದೆ. ಸರ್ಕಾರ ಕೂಡ ಇದಕ್ಕೆ ಮಾನ್ಯತೆ ನೀಡಿದೆ ಕೋರ್ಟ್ ನಮ್ಮ ಬೇಡಿಕೆಯನ್ನು ಪುರಸ್ಕರಿಸಿದೆ. ಆದರೆ, ಪಿಲಿಕುಳ ಕಂಬಳ ನಡೆಸುವ ಕುರಿತು ವಿಚಾರಣೆಯನ್ನು ಮುಂದೂಡಲಾಗಿದೆ ಎಂದರು.

ಕಂಬಳ ಅಸೋಸಿಯೇಷನ್ ಕೋಶಾಧಿಕಾರಿ ಮುಚ್ಚೂರು ಲೋಕೇಶ್ ಶೆಟ್ಟಿ ಈ ಬಗ್ಗೆ ಮಾತಾಡಿ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

ಕಂಬಳದ ಪರ ಕರ್ನಾಟಕ ಸರ್ಕಾರದ ಅಡ್ವಕೇಟ್ ಜನರಲ್ ಶಶಿಕಕಿರಣ್ ಶೆಟ್ಟಿ, ವಿನೋದ್ ಕುಮಾರ್ ಮಧೂರು, ಧನಂಜಯ್ ಕುಮಾರ್ ದೊಡ್ಡಗುತ್ತು ವಾದ ಮಂಡಿಸಿದ್ದರು.

Leave a Reply

Your email address will not be published. Required fields are marked *