ಪುತ್ತೂರು: ಅಮೇರಿಕಾದ ಚಿಕಾಗೋದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ಭಾರತದ ಹಿರಿಮೆಯನ್ನು ಎತ್ತಿಹಿಡಿದ ರಾಷ್ಟ್ರಭಕ್ತ ಸ್ವಾಮಿ ವಿವೇಕಾನಂದ ಅವರ ಉಪನ್ಯಾಸ 132ನೇ ವರ್ಷದ ಆಚರಣೆಯ ಹಿನ್ನಲೆಯಲ್ಲಿ ವಿವೇಕಾನಂದ ಪದವಿಪೂರ್ವ ವಿದ್ಯಾಲಯದ ವೈದೇಹಿ ಸಭಾಂಗಣದಲ್ಲಿ ಅ.11ರಂದು ವಿವೇಕ ವಿಜಯ ವಿಶೇಷ ಉಪನ್ಯಾಸಗಳ ಕಾರ್ಯಕ್ರಮ ನಡೆಯಲಿದೆ ಎಂದು ಕಾಲೇಜಿನ ಆಡಳಿತ ಸಮಿತಿ ಅಧ್ಯಕ್ಷ ರವೀಂದ್ರ ಪಿ ತಿಳಿಸಿದರು.

ಪುತ್ತೂರಿನ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಕಾರ್ಯಕ್ರಮವನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್ ಉದ್ಘಾಟಿಸಲಿದ್ದಾರೆ. ವಿದ್ಯಾರ್ಥಿಗಳಿಗಾಗಿ ಹಾಗೂ ಶಿಕ್ಷಕರಿಗಾಗಿ ಪೂರ್ವಾಹ್ನ ಕಾರ್ಯಕ್ರಮ ನಡೆಯಲಿದೆ. ಅಪರಾಹ್ನ 4.30ಕ್ಕೆ ಸಾರ್ವಜನಿಕರಿಗಾಗಿ ಸಿಂಧೂರ-ಭಾರತದ ವಿಶ್ವರೂಪ ಎಂಬ ವಿಚಾರದ ಬಗ್ಗೆ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರು ಮಾತನಾಡಲಿದ್ದಾರೆ.

ಪುತ್ತೂರಿನ ಅರ್ಥೋಪೆಡಿಕ್ ಸರ್ಜನ್ ಡಾ.ಸಚಿನ್ ಶಂಕರ್ ಹಾರಕೆರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮೊದಲ ಅವಧಿ ಬೆಳಿಗ್ಗೆ 9.45ಕ್ಕೆ ಆರಂಭವಾಗಲಿದ್ದು, ಕೇಸವ ಸಂಕಲ್ಪ ಸಭಾಭವನದಲ್ಲಿ ವಿದ್ಯಾರ್ಥಿಗಳಿಗಾಗಿ ಭಾರತ ವಂದನಾ ವಿವೇಕ ಚಿಂತನಾ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಚಕ್ರವರ್ತಿ ಸೂಲಿಬೆಲೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಪದವಿ ಪೂರ್ವ ಕಾಲೇಜಿನ ಆಡಳಿತ ಸಮಿತಿ ಅಧ್ಯಕ್ಷ ರವೀಂದ್ರ ಪಿ ಅಧ್ಯಕ್ಷತೆ ವಹಿಸಲಿದ್ದಾರೆ. ಬೆಳಿಗ್ಗೆ 11.30ಕ್ಕೆ ವೈದೇಹಿ ಸಭಾಂಗಣದಲ್ಲಿ ಶಿಕ್ಷಕರಿಗಾಗಿ ರಾಷ್ಟ್ರ ರಕ್ಷಣಾ ವಿವೇಕ ಶಿಕ್ಷಣ ಕಾರ್ಯಕ್ರಮ ನಡೆಯಲಿದೆ. ನಿವೃತ್ತ ಪ್ರಾಂಶುಪಾಲ ಡಾ.ವರದರಾಜ ಚಂದ್ರಗಿರಿ ಮುಖ್ಯ ಅತಿಥಿಯಾಗಿ ಭಾಗಿಯಾಗಲಿದ್ದಾರೆ. ಆಡಳಿತ ಮಂಡಳಿ ಸಂಚಾಲಕ ಎಂ.ಗೋಪಾಲಕೃಷ್ಣ ಉಪಸ್ಥಿತರಿರುವರು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಆಡಳಿತ ಸಮಿತಿ ಕೋಶಾಧಿಕಾರಿ ಸಚಿನ್ ಶೆಣೈ, ನಿರ್ದೇಶಕರು ಡಾ.ಕೃಷ್ಣಪ್ರಸನ್ನ, ಪ್ರಾಂಶುಪಾಲ್ ದೇವಿಚರಣ್ ರೈ, ಶಿಕ್ಷಣ ಸಂಯೋಜಕ ಶ್ರೀವತ್ಸ ಉಪಸ್ಥಿತರಿದ್ದರು.




