Breaking
23 Sep 2026, Wed

ಕಾರ್ತಿಕ್ ಸುವರ್ಣ ಮೇರ್ಲ ಕೊಲೆ ಪ್ರಕರಣ: ಇಬ್ಬರಿಗೆ ಜೀವಾವಧಿ ಶಿಕ್ಷೆ

ಪುತ್ತೂರು: ಹಿಂದೂ ಜಾಗರಣ ವೇದಿಕೆಯ ತಾಲೂಕು ಪ್ರಧಾನ ಕಾರ್ಯದರ್ಶಿಯಾಗಿದ್ದ ಕಾರ್ತಿಕ್ ಸುವರ್ಣ ಮೇರ್ಲ (27) ಕೊಲೆ ಪ್ರಕರಣದಲ್ಲಿ ಅಪರಾಧ ಸಾಬೀತಾದ ಇಬ್ಬರು ಆರೋಪಿಗಳಿಗೆ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಆರೋಪಿಗಳಾದ ಪ್ರೀತು ಅಲಿಯಾಸ್ ಪ್ರೀತೇಶ್ ಸುಲಾಯ ಹಾಗೂ ಕಿರಣ್ ಅಲಿಯಾಸ್ ಮಣಿ ಅವರಿಗೆ ತಲಾ ₹3 ಲಕ್ಷ ದಂಡವನ್ನೂ ವಿಧಿಸಲಾಗಿದೆ.


ಪ್ರಕರಣದ ವಿಚಾರಣೆ ನಡೆಸಿದ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸದಾನಂದ ನಾಯ್ಕ್ ಅವರು ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಭಾರತೀಯ ದಂಡ ಸಂಹಿತೆ (ಐಪಿಸಿ) ಕಲಂ 302ರ ಅಡಿಯಲ್ಲಿ ಇಬ್ಬರಿಗೂ ಜೀವಾವಧಿ ಶಿಕ್ಷೆ ಹಾಗೂ ತಲಾ ₹3 ಲಕ್ಷ ದಂಡ ವಿಧಿಸಿದ್ದಾರೆ. ಕಲಂ 341ರ ಅಡಿಯಲ್ಲಿ ಮೂರು ತಿಂಗಳ ಸಾದಾ ಶಿಕ್ಷೆ ಹಾಗೂ ₹500 ದಂಡ ವಿಧಿಸಲಾಗಿದೆ.


ನ್ಯಾಯಾಲಯದ ಆದೇಶದಂತೆ ದಂಡದ ಮೊತ್ತದಲ್ಲಿ ₹5.90 ಲಕ್ಷವನ್ನು ಮೃತ ಕಾರ್ತಿಕ್ ಮೇರ್ಲ ಅವರ ತಾಯಿ ಹೇಮಾವತಿ ಅವರಿಗೆ ನೀಡುವಂತೆ ಸೂಚಿಸಲಾಗಿದೆ.
ಪ್ರಕರಣದ ಮತ್ತೊಬ್ಬ ಆರೋಪಿ ಮಂಗಳೂರಿನ ಅತ್ತಾವರ ನಿವಾಸಿ ಸಂತು ಅಲಿಯಾಸ್ ಸ್ಟಿವನ್ ಮಾಂತೇರೋ ಅವರನ್ನು ನ್ಯಾಯಾಲಯ ನಿರ್ದೋಷಿ ಎಂದು ತೀರ್ಪು ನೀಡಿದೆ. ಕಿರಣ್ ರೈ ಅವರ ಸಹೋದರ ಚರಣ್ ರಾಜ್ ರೈ ಕೂಡ ಪ್ರಕರಣದಲ್ಲಿ ಆರೋಪಿಯಾಗಿದ್ದು, ವಿಚಾರಣೆ ವೇಳೆ ಜಾಮೀನಿನಲ್ಲಿದ್ದ ಅವರು 2022ರಲ್ಲಿ ಹತ್ಯೆಯಾಗಿದ್ದರು.


2019ರಲ್ಲಿ ನಡೆದಿದ್ದ ಕೊಲೆ
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸಂಪ್ಯದಲ್ಲಿ 2019ರ ಸೆಪ್ಟೆಂಬರ್ 3ರಂದು ಕಾರ್ತಿಕ್ ಸುವರ್ಣ ಮೇರ್ಲ ಅವರನ್ನು ಕೊಲೆ ಮಾಡಲಾಗಿತ್ತು. ಈ ಕುರಿತು ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಅಪರಾಧ ಕ್ರಮಾಂಕ 107/2019ರಂತೆ ಐಪಿಸಿ ಕಲಂ 504, 341, 302 ಹಾಗೂ 212ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.


ಪ್ರಕರಣದ ತನಿಖೆ ನಡೆಸಿದ ಅಂದಿನ ತನಿಖಾಧಿಕಾರಿ ಹಾಗೂ ಪೊಲೀಸ್ ನಿರೀಕ್ಷಕರಾಗಿದ್ದ ನಾಗೇಶ್ ಕದ್ರಿ ಅವರು ಅಗತ್ಯ ಸಾಕ್ಷ್ಯಗಳನ್ನು ಸಂಗ್ರಹಿಸಿ ಪ್ರೀತು ಅಲಿಯಾಸ್ ಪ್ರೀತೇಶ್ ಸುಲಾಯ, ಚರಣ್ ರಾಜ್ ರೈ, ಕಿರಣ್ ಅಲಿಯಾಸ್ ಮಣಿ ಹಾಗೂ ಸಂತು ಅಲಿಯಾಸ್ ಸ್ಟಿವನ್ ಮಾಂತೇರೋ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ದೀರ್ಘಕಾಲದ ವಿಚಾರಣೆಯ ಬಳಿಕ ಇಬ್ಬರು ಆರೋಪಿಗಳ ವಿರುದ್ಧ ಕೊಲೆ ಆರೋಪ ಸಾಬೀತಾಗಿದ್ದು, ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿದೆ.

Leave a Reply

Your email address will not be published. Required fields are marked *