Breaking
23 Mar 2026, Mon

ಅ.10ರಂದು ಪುತ್ತೂರಿನಲ್ಲಿ ಡಾ.ಶಿವರಾಮ ಕಾರಂತ ಅವರ 124ನೇ ವರ್ಷದ ಜನ್ಮದಿನಾಚರಣೆ ಹಾಗೂ ಕಾರಂತ ಬಾಲವನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

ಪುತ್ತೂರು: ಕಡಲ ತಡಿಯ ಭಾರ್ಗವ ಡಾ.ಶಿವರಾಮ ಕಾರಂತ ಅವರ 124ನೇ ವರ್ಷದ ಜನ್ಮದಿನಾಚರಣೆ ಹಾಗೂ ಕಾರಂತ ಬಾಲವನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಅ.10 ರಂದು ಪುತ್ತೂರಿನ ಬಾಲವನ ಬಯಲು ರಂಗಮಂದಿರದಲ್ಲಿ ನಡೆಯಲಿದೆ. 2024ನೇ ಸಾಲಿನ ಕಾರಂತ ಬಾಲವನ ಪ್ರಶಸ್ತಿಯನ್ನು ಹಿರಿಯ ಸಾಹಿತಿ ಜನಪದ ವಿದ್ವಾಂಸ ಡಾ.ಬಿ.ಎ.ವಿವೇಕ ರೈ ಹಾಗೂ 2025ನೇ ಸಾಲಿನ ಪ್ರಶಸ್ತಿಯನ್ನು ಶಿಕ್ಷಣ ಸಾಹಿತಿ ಮಕ್ಕಳ ಮಂಟಪದ ರೂವಾರಿ ಡಾ.ಎನ್.ಸುಕುಮಾರ ಗೌಡ ಅವರಿಗೆ ಪ್ರದಾನ ಮಾಡಲಾಗುವುದು ಎಂದು ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕರ್ನಾಟಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಹಾಯಕ ಆಯುಕ್ತರ ಕಚೇರಿ ಹಾಗೂ ಡಾ.ಕೋಟ ಶಿವರಾಮ ಕಾರಂತ ಬಾಲವನ ಸಮಿತಿ ಆಶ್ರಯದಲ್ಲಿ ದಿನವಿಡೀ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮವು ಶಾಸಕ ಅಶೋಕ್ ಕುಮಾರ್ ರೈ ಅವರ ಅಧ್ಯಕ್ಷತೆಯಲ್ಲಿ ವಿಧಾನಸಭಾ ಅಧ್ಯಕ್ಷ ಯು.ಟಿ ಖಾದರ್ ಅವರ ಉಪಸ್ಥಿತಿಯಲ್ಲಿ ನಡೆಯಲಿದೆ.

ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಉದ್ಘಾಟಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ಎಸ್ ತಂಗಡಗಿ ಪ್ರಶಸ್ತಿ ಪ್ರದಾನ ನಡೆಸಲಿದ್ದಾರೆ. ಹಿರಿಯ ಸಾಹಿತಿ ಹಾಗೂ ಕಾರಂತರ ಸಹೋದರ ಸಂಬಂಧಿ ಎಂ.ಶಾಂತಾರಾಮ ರಾವ್ ಕಾರಂತ ಸ್ಮರಣೆ ಮಾಡಲಿದ್ದಾರೆ. ಸಂಸದ ಕ್ಯಾ. ಬ್ರಿಜೇಶ್ ಚೌಟ, ರಾಜ್ಯಸಭಾ ಸದಸ್ಯ ಡಾ.ವಿರೇಂದ್ರ ಹೆಗ್ಗಡೆ, ಶಾಸಕರಾದ ವೇದವ್ಯಾಸ್ ಕಾಮತ್, ವೈ.ಭರತ್ ಶೆಟ್ಟಿ, ಹರೀಶ್ ಪೂಂಜಾ, ರಾಜೇಶ್ ನಾಯ್ಕ್, ಉಮಾನಾಥ ಕೋಟ್ಯಾನ್, ಭಾಗೀರಥಿ ಮುರುಳ್ಯ ಅತಿಥಿಗಳಾಗಿ ಭಾಗಿಯಾಗಲಿದ್ದಾರೆ. ತುಳು ಅಕಾಡೆಮಿ ಅಧ್ಯಕ್ಷ ತಾರನಾಥ ಕಾಪಿಕಾಡ್, ಬ್ಯಾರಿ ಅಕಾಡೆಮಿ ಅಧ್ಯಕ್ಷ ಉಮರ್ ಯು.ಎಚ್, ಕೊಂಕಣಿ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾಲಿ ಬಿಲ್ವಾರಿಸ್, ಅರೆಭಾಷೆ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ ಎಸ್ ಗಟ್ಟಿ, ಮೀನುಗಾರಿಕಾ ಅಭಿವೃದ್ಧಿ ನಿಗಮದ ಮಾಲ ನಾರಾಯಣ ರಾವ್, ರಾಜ್ಯ ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಎಂ.ಎಚ್ ರೇವಣ್ಣ, ಮಂಗಳೂರು ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್, ಪುತ್ತೂರು ಪುಡಾ ಅಧ್ಯಕ್ಷ ರಾಮಚಂದ್ರ ಅಮಳ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ.ಶ್ರೀನಾಥ್ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ಸಾಂಸ್ಕೃತಿಕ ಸಂಭ್ರಮ ಕಾರಂತ ಜನ್ಮದಿನಾಚರಣೆಯ ಅಂಗವಾಗಿ ದಿನವಿಡೀ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 9.30 ರಿಂದ ಕಾರಂತ ನೃತ್ಯ ನಮನ ವಿಶ್ವಕಲಾನಿಕೇತನ ತಂಡದಿಂದ ಭರತನಾಟ್ಯ, 10.30ರಿಂದ ಕಾರಂತ ಸ್ಮರಣೆ-ಪ್ರಶಸ್ತಿ ಪ್ರದಾನ, ಅಪರಾಹ್ನ 2ರಿಂದ ಕಾರಂತರಿಗೆ ಯಕ್ಷನಮನ ಆಂಜನೇಯ ಮಹಿಳಾ ಯಕ್ಷಗಾನ ತಂಡದಿಂದ ಶ್ರೀರಾಮ ನಿರ್ಯಾಣ ತಾಳಮದ್ದಲೆ, 6ರಿಂದ ಕಾರಂತ ರಂಗನಮನ ಡಾ.ಕಾರಂತ ರಚನೆಯ ಸೋಮಿಯ ಸೌಭಾಗ್ಯ ಗೀತನಾಟಕ ನಡೆಯಲಿದೆ. ಕಾರ್ಯಕ್ರಮ ರಾತ್ರಿ 8.30 ತನಕ ನಡೆಯಲಿದೆ.

ಪ್ರಶಸ್ತಿ ಪುರಸ್ಕೃತರು

ಡಾ.ಬಿ.ಎ.ವಿವೇಕ್ ರೈ ವಿಶ್ರಾಂತ ಉಪಕುಲಪತಿ ಹಾಗೂ ಜನಪದ ವಿದ್ವಾಂಸ, ಡಾ.ಶಿವರಾಮ ಕಾರಂತ ಪೀಠ ನಿರ್ದೇಶಕರು, ಗಿಳಸೂವೆ, ರಂಗದೊಳಗಿನ ಬಹಿರಂಗ, ನೆತ್ತರ ಮದುವೆ ಸಹಿತ ಕನ್ನಡ-ಇಂಗ್ಲೀಷ್ ಭಾಷೆಯಲ್ಲಿ 50ಕ್ಕೂ ಹೆಚ್ಚು ಕೃತಿ ರಚನೆ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ತುಳು ಅಕಾಡೆಮಿ ಪ್ರಶಸ್ತಿ ಸಹಿತ ನೂರಾರು ಪ್ರಶಸ್ತಿಗಳ ಗರಿ.

ಡಾ.ಎನ್ ಸುಕುಮಾರ ಗೌಡ ಅಂತಾರಾಷ್ಟ್ರೀಯ ಮಟ್ಟದ ಖ್ಯಾತಿ, ಇವರ ಇಂಗ್ಲೀಷ್ ಕೃತಿಯನ್ನು ಡಾ.ಕಾರಂತರಿಂದಲೇ ಕನ್ನಡಕ್ಕೆ ಭಾಷಾಂತರ ಮಾಡಿರುವ ಹೆಗ್ಗಳಿಕೆ, ಕೆನಡಾದ ಟೊರೆಂಟೊ ವಿಶ್ವವಿದ್ಯಾಲಯದಿಂದ ಪಿಎಚ್ ಡಿ ಪದವಿ, ಶಿಕ್ಷಣ ಸಾಹಿತ್ಯದಲ್ಲಿ ಗುಣಶೋಧ, ಮಗು ಮನೆಯಿಂದ ಶಾಲೆಗೆ ಸಹಿತ ಹಲವಾರು ಕೃತಿಗಳ ರಚನೆ, ಭಾರತ, ಕೆನಡಾ, ಅಮೇರಿಕಾದ ರಾಷ್ಟ್ರೀಯ ಪತ್ರಿಕೆಗಳಲ್ಲಿ ಇವರ ಪ್ರಬುದ್ಧ ಪ್ರಬಂಧಗಳ ಪ್ರಕಟ ಹಲವಾರು ಪ್ರಶಸ್ತಿಗಳು ಮುಡಿಗೆ ಸೇರಿವೆ.

ಪತ್ರಿಕಾಗೋಷ್ಠಿಯಲ್ಲಿ ಕಸಪಾ ಪುತ್ತೂರು ಘಟಕಾಧ್ಯಕ್ಷ ಉಮೇಶ್ ನಾಯಕ್ ಪುತ್ತೂರು, ಕಾರ್ಯಕ್ರಮ ಸಂಯೋಜಕರಾದ ಜಗನ್ನಾಥ ಅರಿಯಡ್ಕ ಮತ್ತು ರಮೇಶ್ ಉಳಯ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *