ಬೆಂಗಳೂರು: ನಮ್ಮ ಮೆಟ್ರೋ ಪಿಲ್ಲರ್ ಗಳಿಗೆ ಬೆಳಕಿನ ವ್ಯವಸ್ಥೆ ಅಳವಡಿಸುವ ಕಾಮಗಾರಿ ವೇಳೆ ವಿದ್ಯುತ್ ಸ್ಪರ್ಶಿಸಿ ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ಟ್ರಿನಿಟಿ ಮೆಟ್ರೋ ನಿಲ್ದಾಣದ ಸಮೀಪ ಶುಕ್ರವಾರ ನಡೆದಿದೆ.

ಮೃತರನ್ನು ಜಿಗಣಿ ಸಮೀಪದ ಮುತ್ತುರಾಯಸ್ವಾಮಿ ದೊಡ್ಡಿ ನಿವಾಸಿ ಗುರಪ್ಪ (56) ಎಂದು ಗುರುತಿಸಲಾಗಿದೆ. ಅವರು ಮೆಟ್ರೋ ಪಿಲ್ಲರ್ ಗಳಿಗೆ ಬೆಳಕಿನ ವ್ಯವಸ್ಥೆ ಕಾಮಗಾರಿ ನಿರ್ವಹಿಸುತ್ತಿದ್ದ ಗುತ್ತಿಗೆ ಸಂಸ್ಥೆಯ ಕಾರ್ಮಿಕರಾಗಿದ್ದರು.

ಶುಕ್ರವಾರ ಮಧ್ಯಾಹ್ನ ಟ್ರಿನಿಟಿ ಮೆಟ್ರೋ ನಿಲ್ದಾಣದ ಹೊರಭಾಗದಲ್ಲಿರುವ ಪಿಲ್ಲರ್ ಸಂಖ್ಯೆ 153ರ ಬಳಿ ಭೂಮಿಯಲ್ಲಿ ಅರ್ಥ್ ಪಿಟ್ ಕಾಮಗಾರಿ ನಡೆಸುತ್ತಿದ್ದ ವೇಳೆ ವಿದ್ಯುತ್ ಸಂಪರ್ಕಕ್ಕೆ ಬಂದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು.

ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲು ಪ್ರಯತ್ನಿಸಲಾಯಿತಾದರೂ, ಆಸ್ಪತ್ರೆಗೆ ತಲುಪುವಷ್ಟರಲ್ಲೇ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು.
ಘಟನೆಯ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಸಂಬಂಧಿತ ಅಧಿಕಾರಿಗಳು ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದು, ಮೃತ ಕಾರ್ಮಿಕರ ಕುಟುಂಬಕ್ಕೆ ಬಿಎಂಆರ್ಸಿಎಲ್ ಸಂತಾಪ ಸೂಚಿಸಿದೆ.


