ಬೆಳ್ತಂಗಡಿ: ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ವತಿಯಿಂದ ಸಿಎ (ಚಾರ್ಟರ್ಡ್ ಅಕೌಂಟೆನ್ಸಿ) ಸ್ಪರ್ಧಾತ್ಮಕ ಪರೀಕ್ಷೆಯ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಕ್ರಮ ಕಾಲೇಜು ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಯುವ ಲೆಕ್ಕ ಪರಿಶೋಧಕಿ ನಿರೀಕ್ಷಾ ನಾವರ, ಪರಿಶ್ರಮ ಮತ್ತು ಪರಿವರ್ತನೆಯ ಮನೋಭಾವದಿಂದ ವಿದ್ಯಾರ್ಥಿಗಳು ತಮ್ಮ ಗುರಿಗಳನ್ನು ಸಾಧಿಸಬಹುದು ಎಂದು ಹೇಳಿದರು. ಸಿಎ ಓದುವ ಹಂತದಲ್ಲಿ ನಿಖರ ಹಾಗೂ ನಿರಂತರ ಅಭ್ಯಾಸ ಅತ್ಯಂತ ಮುಖ್ಯವಾಗಿದ್ದು, ಪಠ್ಯ ಅಧ್ಯಯನ, ಸೂಕ್ತ ಮಾರ್ಗದರ್ಶನ ಹಾಗೂ ಸಂಶೋಧನಾತ್ಮಕ ಕಲಿಕೆಯು ಯಶಸ್ಸಿಗೆ ಪೂರಕವಾಗುತ್ತದೆ ಎಂದು ತಿಳಿಸಿದರು.

ಸಿಎ ಪರೀಕ್ಷೆ ಅತ್ಯಂತ ಕಠಿಣ ಎಂಬ ಅಭಿಪ್ರಾಯ ಸಾಮಾನ್ಯವಾಗಿದ್ದರೂ, ದೀರ್ಘಾವಧಿಯ ಸಿದ್ಧತೆ ಮತ್ತು ಸರಿಯಾದ ಯೋಜನೆಯೊಂದಿಗೆ ಭವಿಷ್ಯದ ಹಾದಿಯನ್ನು ಸುಗಮಗೊಳಿಸಬಹುದು ಎಂದರು. ಯಶಸ್ಸಿನತ್ತ ಸಾಗಲು ಸೂಕ್ತ ಮನಸ್ಥಿತಿ, ಸಮರ್ಪಕ ಸಿದ್ಧತೆ ಮತ್ತು ಸರಿಯಾದ ಮಾರ್ಗದರ್ಶಕರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳ ಸಾಧನೆಗೆ ವಿದ್ವತ್ ಕಾಲೇಜು ಅಗತ್ಯ ಶೈಕ್ಷಣಿಕ ಅವಕಾಶ ಮತ್ತು ಉತ್ತೇಜನ ನೀಡುತ್ತಿದ್ದು, ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವುದು ವಿದ್ಯಾರ್ಥಿಗಳ ಜವಾಬ್ದಾರಿ ಎಂದು ಹೇಳಿದರು.

ಶೈಕ್ಷಣಿಕ ನಿರ್ದೇಶಕ ಗಂಗಾಧರ್ ಇ.ಎಂ. ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಆಪ್ತ ಸಮಾಲೋಚನೆ ನಡೆಸುವ ಮಾದರಿ ಶಿಕ್ಷಣ ವ್ಯವಸ್ಥೆಯನ್ನು ಕಾಲೇಜು ಅನುಸರಿಸುತ್ತಿದೆ ಎಂದರು. ಕೆಟ್ಟ ಹವ್ಯಾಸಗಳಿಂದ ದೂರವಿದ್ದು ಧನಾತ್ಮಕ ಚಿಂತನೆಗಳತ್ತ ಗಮನ ಹರಿಸಿದರೆ ಉತ್ತಮ ಸಾಧನೆ ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಪ್ರಜ್ವಲ್ ರೈ, ಟ್ರಸ್ಟಿ ಕಾಶಿನಾಥ್ ಎಂ.ಕೆ., ಆಡಳಿತಾಧಿಕಾರಿ ಅಶೋಕ್ ಶೆಟ್ಟಿ, ವಾಣಿಜ್ಯ ವಿಭಾಗ ಮುಖ್ಯಸ್ಥೆ ಹಾಗೂ ಕಾರ್ಯಕ್ರಮ ಸಂಯೋಜಕಿ ಡಾ. ಮಹಿತಾ ಉಪಸ್ಥಿತರಿದ್ದರು.
ವಿದ್ಯಾರ್ಥಿ ಸ್ಪಂದನ್ ಶೆಟ್ಟಿ ಸ್ವಾಗತಿಸಿದರು. ಮೈಲಾರ್ ಕಾಳಿಂಗೇಶ್ವರ್ ಚಿಳ್ಳಾಲೆ ಅತಿಥಿ ಪರಿಚಯ ಮಾಡಿಕೊಟ್ಟರು. ಬುವಿ ಎಸ್. ಹೆಗಡೆ ಕಾರ್ಯಕ್ರಮ ನಿರೂಪಿಸಿದರು.

“ಮನೋಶಕ್ತಿಯೇ ಸಾಧನೆಯ ಸಿದ್ಧಹಾದಿ” ಎಂಬ ಸಂದೇಶದೊಂದಿಗೆ ವಿದ್ಯಾರ್ಥಿಗಳಿಗೆ ಸವಾಲುಗಳನ್ನು ಸ್ವೀಕರಿಸಿ ಕನಸುಗಳನ್ನು ನನಸು ಮಾಡುವ ತನಕ ಪ್ರಯತ್ನ ನಿಲ್ಲಿಸಬಾರದು ಎಂದು ನಿರೀಕ್ಷಾ ನಾವರ ಕರೆ ನೀಡಿದರು.


