ಕಲ್ಲಡ್ಕ: ಶಾಲೆಯ ಏಳಿಗೆ ಅಲ್ಲಿನ ಶಿಕ್ಷಕರ ಹವ್ಯಾಸ, ಕಾರ್ಯತತ್ಪರತೆ ಹಾಗೂ ಸೇವಾ ಮನೋಭಾವನೆ ಮೇಲೆ ಅವಲಂಬಿತವಾಗಿದೆ ಎಂದು ರೋಟರಿ ಕ್ಲಬ್ ಬಿಸಿ ರೋಡ್ ಸಿಟಿ ಅಧ್ಯಕ್ಷ ದಿವಾಕರ ಶೆಟ್ಟಿ ಹೇಳಿದರು.

ಜೂನ್ 27ರಂದು ಬಾಳ್ತಿಲ ಗ್ರಾಮದ ಕಂಟಿಕ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ಪದೋನ್ನತಿ ಹೊಂದಿ ಪಾಟ್ರೆಕೋಡಿ ಶಾಲೆಗೆ ವರ್ಗಾವಣೆಗೊಂಡ ಶಿಕ್ಷಕಿ ಚೇತನಾ ಕುಮಾರಿ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಪೋಷಕರ ಜೊತೆಗಿನ ಶಿಕ್ಷಕರ ಒಡನಾಟವು ಶಾಲೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮಕ್ಕಳಿಗೆ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳ ಮೂಲಕ ಉತ್ತಮ ಹವ್ಯಾಸ ಬೆಳೆಸಲು ಶಿಕ್ಷಕರು ಕಾರಣರಾಗುತ್ತಾರೆ ಎಂದು ಯಕ್ಷಗಾನ ಗುರು ಅಲೆತ್ತೂರು ನರಸಿಂಹ ಮಯ್ಯ ತಿಳಿಸಿದರು.

ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಸೇವಾ ಅವಧಿಯಲ್ಲಿ ಶಿಕ್ಷಕರು ಹೇಗೆ ಕೊಡುಗೆ ನೀಡಬಹುದು ಎಂಬುದಕ್ಕೆ ಚೇತನಾ ಕುಮಾರಿ ಅವರು ಉತ್ತಮ ಉದಾಹರಣೆಯಾಗಿದ್ದಾರೆ ಎಂದು ರಾಜ್ಯಮಟ್ಟದ ಶಿಕ್ಷಣ ರತ್ನ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಸಂಗೀತ ಶರ್ಮ ಪಿ ಜಿ ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಶಿಕ್ಷಕ ಸಂಜೀವ ರೈ ವಹಿಸಿದ್ದರು. ಇದೇ ವೇಳೆ ಚೇತನಾ ಕುಮಾರಿ ಶಾಲಾ ಮಕ್ಕಳಿಗೆ ಉಚಿತ ಟಿಫಿನ್ ಬಾಕ್ಸ್ ವಿತರಿಸಿ, ತಮ್ಮ ಸೇವಾ ಅವಧಿಯಲ್ಲಿ ಸಹಕರಿಸಿದವರನ್ನು ಗೌರವಿಸಿದರು.

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಬಿಸಿ ರೋಡ್ ಸಿಟಿಯ ಶೇಸಪ್ಪ ಮೂಲ್ಯ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಸೌಮ್ಯಶ್ರೀ, ಉಪಾಧ್ಯಕ್ಷ ಮಾಧವ ಸೇರಿದಂತೆ ಹಲವು ಗಣ್ಯರು, ಪೋಷಕರು, ವಿದ್ಯಾರ್ಥಿಗಳು ಮತ್ತು ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಶಶಿಕಲಾ ಸ್ವಾಗತಿಸಿದರು. ಗೌರವ ಶಿಕ್ಷಕಿ ಮೋನಿಷಾ ವಂದಿಸಿದರು. ಅತಿಥಿ ಶಿಕ್ಷಕಿ ಜಯಂತಿ ಕಾರ್ಯಕ್ರಮ ನಿರೂಪಿಸಿದರು.


