Breaking
22 Mar 2026, Sun

ಮಂಗಳೂರು: ಚಿನ್ನದ ಗಟ್ಟಿ ದರೋಡೆ – 5 ಮಂದಿ ಆರೋಪಿಗಳು ಪೊಲೀಸರ ವಶಕ್ಕೆ

ಮಂಗಳೂರು: ನಗರದ ಹಂಪನಕಟ್ಟೆಯಲ್ಲಿ ಚಿನ್ನದ ಅಂಗಡಿಯಲ್ಲಿ ಕೆಲಸಮಾಡುತ್ತಿದ್ದ ವ್ಯಕ್ತಿಯನ್ನು ಅಪಹರಿಸಿ ಚಿನ್ನದ ಗಟ್ಟಿ ದರೋಡೆ ನಡೆಸಿದ ಪ್ರಕರಣದಲ್ಲಿ ಅಪ್ರಾಪ್ತ ಬಾಲಕನನ್ನು ಸೇರಿ 5 ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಬಂಧಿತ ಆರೋಪಿಗಳನ್ನು ಉಳ್ಳಾಲದ ಕೋಟೆಕಾರು ಕೆ.ಸಿ.ರೋಡ್ ನಿವಾಸಿ ಫಾರಿಶ್(18), ಉಳ್ಳಾಲದ ಮುಕ್ಕಚೇರಿ ನಿವಾಸಿ ಸಫ್ವಾನ್(23), ಉಳ್ಳಾಲದ ಮಾಸ್ತಿಕಟ್ಟೆ ನಿವಾಸಿ ಅರಾಫತ್ ಆಲಿ(18), ಉಳ್ಳಾಲದ ದರ್ಗಾದ ಹತ್ತಿರ ನಿವಾಸಿ ಫರಾಝ್(19) ಎಂದು ಗುರುತಿಸಲಾಗಿದೆ.

ಸೆ. 26 ರಂದು ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮುಸ್ತಾಫ ಅವರು ಸ್ಕೂಟರ್ ಸೀಟಿನ ಅಡಿಯಲ್ಲಿ 1,650 ಗ್ರಾಂ ತೂಕದ ಚಿನ್ನದ ಗಟ್ಟಿಯನ್ನು ಇಟ್ಟುಕೊಂಡು ಹೋಗುತ್ತಿದ್ದರು. ಈ ವೇಳೆ ಮಂಗಳೂರು ಕಾರ್ ಸ್ಟ್ರೀಟ್ ವೆಂಕಟರಮಣ ದೇವಸ್ಥಾನದ ಎದುರಿನ ರಸ್ತೆಯಲ್ಲಿ ಇಬ್ಬರು ಆರೋಪಿಗಳು ಸ್ಕೂಟರ್ ನಲ್ಲಿ ಬಂದು ಅವರನ್ನು ತಡೆದು ನಿಲ್ಲಿಸಿ, ಮುಸ್ತಾಫರವರನ್ನು ಕಾರಿನಲ್ಲಿ ಅಪಹರಿಸಿಕೊಂಡು ಹೋಗಿ ಹಲ್ಲೆ ನಡೆಸಿ, ಬಳಿಕ ಮಂಗಳೂರು ಎಕ್ಕೂರಿನಲ್ಲಿ ಕಾರಿನಿಂದ ಇಳಿಸಿ ಚಿನ್ನದ ಗಟ್ಟಿಯನ್ನು ಕಸಿದುಕೊಂಡು ಪರಾರಿಯಾದರು.

ಈ ಕುರಿತು ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 111/2025 ಕಲಂ 137(2), 310(2) ಬಿಎನ್‌ಎಸ್-2023 ರಂತೆ ಪ್ರಕರಣ ದಾಖಲಿಸಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ಬಾಲಕನು ಈ ಹಿಂದೆ ಮಂಗಳೂರು ಹಂಪನಕಟ್ಟೆಯಲ್ಲಿರುವ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದವನು. ಮುಸ್ತಾಫ ಚಿನ್ನದ ಗಟ್ಟಿಯನ್ನು ತೆಗೆದುಕೊಂಡು ಹೋಗುವ ಮಾಹಿತಿಯನ್ನು ಅಪ್ರಾಪ್ತ ಬಾಲಕ ಫಾರಿಶ್‌ ಗೆ ನೀಡಿದ್ದರಿಂದ ಆರೋಪಿಗಳು ಮುಸ್ತಾಫರವರನ್ನು ಅಡ್ಡಗಟ್ಟಿ ಅಪಹರಿಸಿ ಹಲ್ಲೆ ಮಾಡಿ ಸುಮಾರು 1.5 ಕೋಟಿ ರೂ. ಮೌಲ್ಯದ 1,650 ಗ್ರಾಂ ಚಿನ್ನದ ಗಟ್ಟಿಯನ್ನು ತೆಗೆದುಕೊಂಡು ಪರಾರಿಯಾದರು ಎಂದು ತಿಳಿದು ಬಂದಿದೆ.

ಈ ಪ್ರಕರಣದ ಆರೋಪಿಗಳನ್ನು ಉಪ ಪೊಲೀಸ್ ಆಯುಕ್ತರು (ಅಪರಾಧ ಮತ್ತು ಸಂಚಾರ) ಮಂಗಳೂರು ನಗರ ಮತ್ತು ಸಹಾಯಕ ಪೊಲೀಸ್ ಆಯುಕ್ತರು, ಕೇಂದ್ರ ಉಪವಿಭಾಗ, ಸಹಾಯಕ ಪೊಲೀಸ್ ಆಯುಕ್ತರು, ಸಿಸಿಬಿ ಘಟಕ ಮಂಗಳೂರು ರವರ ಮಾರ್ಗದರ್ಶನದಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣಾ ಅಧಿಕಾರಿ ಸಿಬ್ಬಂದಿಯವರು ಹಾಗೂ ಮಂಗಳೂರು ಸಿಸಿಬಿ ಘಟಕದ ಅಧಿಕಾರಿ ಸಿಬ್ಬಂದಿಯವರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ ಸ್ಕೂಟರನ್ನು ವಶಪಡಿಸಿಕೊಳ್ಳಲಾಗಿದೆ. ಆದರೆ ಕಾರು ಮತ್ತು ಸೊತ್ತನ್ನು ಸ್ವಾಧೀನಪಡಿಸಿಕೊಳ್ಳಲು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Leave a Reply

Your email address will not be published. Required fields are marked *