ಬೈಂದೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯದಲ್ಲಿ ಯಾತ್ರಾರ್ಥಿಯೊಬ್ಬರ ಚಿನ್ನದ ಸರವನ್ನು ಕದ್ದ ಮಹಿಳೆಯನ್ನು 24 ಗಂಟೆಯೊಳಗೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಯಾದವ ದುರ್ಗಮ್ಮ ಎಂದು ಗುರುತಿಸಲಾಗಿದೆ.

ಆರೋಪಿಯೂ 2.5 ಲಕ್ಷ ರೂ. ಮೌಲ್ಯದ ಚಿನ್ನದ ಸರವನ್ನು ಕದ್ದು ಪರಾರಿಯಾಗಿದ್ದು ಬಳಿಕ ಯಾತ್ರಾರ್ಥಿ ದೇವಿಪ್ರಿಯಾ ನೀಡಿದ ದೂರು ಆಧರಿಸಿ, ಪೊಲೀಸರು ಸಿಸಿಟಿವಿ ದೃಶ್ಯಾವಳಿ ಮತ್ತು ತಾಂತ್ರಿಕ ನೆರವು ಪಡೆದು ಆಕೆಯನ್ನು ಪತ್ತೆಹಚ್ಚಿದ್ದಾರೆ. ನಂತರ ಕಳವಾದ ಆಭರಣವನ್ನು ವಶಪಡಿಸಿಕೊಂಡು ಮಾಲೀಕರಿಗೆ ಹಿಂದಿರುಗಿಸಿದ್ದಾರೆ.

ಕಳವಾದ 24 ಗಂಟೆಯೊಳಗೆ ಆರೋಪಿಯನ್ನು ಪತ್ತೆಹಚ್ಚಿದ ಪೊಲೀಸರ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಸದ್ಯ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.




