ಸಿದ್ದಕಟ್ಟೆ: ನಾಗರೀಕರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಅಪೂರ್ಣ. ಇದು ಸರಕಾರದ ಬೊಕ್ಕಸಕ್ಕೆ ನಷ್ಟ ಎಂದು ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಸದಸ್ಯ ಪ್ರಭಾಕರ ಪ್ರಭು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ಪ್ರತಿಕ್ರಿಯೆ ನೀಡಿರುವ ಅವರು ಕರ್ನಾಟಕ ರಾಜ್ಯ ಸರಕಾರದ ಸೂಚನೆ ಮೇರೆಗೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ರಾಜ್ಯದಲ್ಲಿನ ಎಲ್ಲಾ ಕುಟುಂಬಗಳಲ್ಲಿರುವ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿ ಗತಿಯ ಬಗ್ಗೆ ಈಗಾಗಲೆ ಸಮೀಕ್ಷೆ ಆರಂಭಿಸಿದ್ದು, ಅಧಿಕಾರಿಗಳು ಕೇಳಿದ ಎಲ್ಲಾ ಪ್ರಶ್ನೆಗಳಿಗೆಲ್ಲ ಮಾಹಿತಿ ನೀಡಲೇ ಬೇಕು ಎಂದೇನಿಲ್ಲ ಎಂಬುದಾಗಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಕಾರ್ಯದರ್ಶಿ ಹೇಳಿಕೆ ನೀಡಿದ್ದಾರೆ.

ಸಮೀಕ್ಷೆಯನ್ನು ಕೈಗೆತ್ತಿಕೊಂಡಿರುವ ಸ್ವತಃ ಆಯೋಗದ ಸದಸ್ಯ ಕಾರ್ಯದರ್ಶಿಯೇ ಈ ರೀತಿಯ ಹೇಳಿಕೆ ಕೊಡುವುದರಿಂದ ರಾಜ್ಯದಲ್ಲಿ ಸಮೀಕ್ಷೆಯು ಅಪೂರ್ಣಗೊಂಡಂತೆ ಆಗಲಿದ್ದು, ಇದರಿಂದ ಸರಕಾರದ ಬೊಕ್ಕಸಕ್ಕೆ ನಷ್ಟವೇ ಹೊರತು ಯಾವುದೇ ಪ್ರಯೋಜನವಿಲ್ಲ ಎಂದು ಜನಸಾಮಾನ್ಯರು ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಸಮೀಕ್ಷೆಯಲ್ಲಿ ಭಾಗವಹಿಸುವುದು, ಬಿಡುವುದು ಜನರ ಹಾಗೂ ಕುಟುಂಬಸ್ಥರ ಸ್ವಯಂ ಇಚ್ಛೆಗೆ ಬಿಡಲಾಗಿದೆ ಹಾಗೂ ಸಂಬಂಧ ಪಟ್ಟ ಸಮೀಕ್ಷೆ ಅಧಿಕಾರಿಗಳು ಜನಸಾಮಾನ್ಯರಲ್ಲಿ ಮಾಹಿತಿಗಾಗಿ ಯಾವುದೇ ತರದ ಒತ್ತಾಯ ಮಾಡುವಂತಿಲ್ಲ ಎಂದೂ ಆಯೋಗದ ಸದಸ್ಯ ಕಾರ್ಯದರ್ಶಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವುದರಿಂದ ನಾಗರೀಕರು ಈ ಸಮೀಕ್ಷೆಗೆ ಅಷ್ಟೇನೂ ಮಹತ್ವ ನೀಡಬೇಕು ಎಂದು ಅನ್ನಿಸುವುದಿಲ್ಲ ಎಂಬುದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.




