Breaking
25 Sep 2026, Fri

ಮನೆಯಲ್ಲಿ ಪ್ರೀತಿಗೆ ವಿರೋಧ: ಆತ್ಮಹತ್ಯೆಗೆ ಯತ್ನಿಸಿದ ಯುವತಿ ನೀರುಪಾಲು, ಯುವಕ ಬಚಾವು

ಶಿವಮೊಗ್ಗ: ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ ಕಾರಣಕ್ಕೆ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಯತ್ನಿಸಿ, ಯುವಕ ಪ್ರಾಣಾಪಾಯದಿಂದ ಪಾರಾಗಿ ಯುವತಿ ನೀರು ಪಾಲಾದ ಘಟನೆ ಭದ್ರಾವತಿ ತಾಲ್ಲೂಕಿನ ಅಂತರಗಂಗೆಯಲ್ಲಿ ನಡೆದಿದೆ.

ಮೃತ ಯುವತಿ ಭೋವಿ ಕಾಲೋನಿ ನಿವಾಸಿ ಸ್ವಾತಿ (19) ಸೂರ್ಯ (20) ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಇಬ್ಬರು ನೆರೆಹೊರೆಯ ನಿವಾಸಿಗಳಾಗಿದ್ದು ಇವರ ಪ್ರೀತಿಗೆ ಮನೆಯವರ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ ಇಬ್ಬರಿಗೂ ಬುದ್ದಿವಾದ ಹೇಳಿದ್ದಾರೆ ಎನ್ನಲಾಗಿದೆ. ಇದರಿಂದ ಮನನೊಂದ ಈ ಜೋಡಿ ಇರುವೆ ಕ್ರಿಮಿನಾಶಕ ಸೇವಿಸಿ ಬಳಿಕ ಅಂತರಗಂಗೆಯ ಉಕ್ಕುಂದದಲ್ಲಿರುವ ಕಾಲುವೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಈ ಸಂದರ್ಭ ಸೂರ್ಯ ಮರದ ದಿಮ್ಮಿಯ ಸಹಾಯದಿಂದ ಪಾರಾಗಿದ್ದು ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಸ್ವಾತಿ ನೀರುಪಾಲಾಗಿದ್ದು ಅಗ್ನಿಶಾಮಕ ದಳದ ಸಿಬ್ಬಂದಿ ಶೋಧಕಾರ್ಯ ಮುಂದುವರಿಸಿದ್ದಾರೆ.

ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *