ಹಲವಾರು ಜನಪ್ರಿಯ ಹಾಡುಗಳನ್ನು ಹಾಡಿರುವ ಖ್ಯಾತ ಗಾಯಕ ಜುಬೀನ್ (52) ಅವರು ಸ್ಕೂಬಾ ಡೈವಿಂಗ್ ಮಾಡುವ ವೇಳೆ ನಿಧನ ಹೊಂದಿದ್ದಾರೆ.
ಸಿಂಗಪುರದಲ್ಲಿ ಸ್ಕೂಬಾ ಡೈವಿಂಗ್ (ಆಳ ಸಮುದ್ರದಲ್ಲಿ ಈಜಾಟ) ಸಾಹಸ ಮಾಡುವಾಗ ಅವರು ನಿಧನ ಹೊಂದಿದ್ದು, ಸಿಂಗಪುರದ ಸ್ಥಳೀಯ ಪೊಲೀಸರ ವರದಿಯಂತೆ ಜುಬೀನ್ ಗರ್ಗ್ ಅವರನ್ನು ನದಿಯೊಂದರಿಂದ ಹೊರಗೆ ತೆಗೆಯಲಾಗಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತಾದರೂ ಜುಬೀನ್ ಅವರು ಚಿಕಿತ್ಸೆಗೆ ಸ್ಪಂದಿಸದೆ ನಿಧನ ಹೊಂದಿದ್ದಾರೆ.

ಅಸ್ಸಾಂ ಮೂಲದವರಾದ ಜುಬೀನ್ ಗರ್ಗ್ ಅವರು ಕನ್ನಡ ಸೇರಿದಂತೆ ಭಾರತದ ಹಲವು ಭಾಷೆಗಳಲ್ಲಿ ಅತ್ಯುತ್ತಮ ಹಾಡುಗಳನ್ನು ಹಾಡಿ ಖ್ಯಾತರಾಗಿದ್ದರು.
ಕನ್ನಡದಲ್ಲಿ ಗಣೇಶ್ ನಟಿಸಿರುವ ‘ಹುಡುಗಾಟ’ ಸಿನಿಮಾದ ‘ಒಮ್ಮೊಮ್ಮೆ ಹೀಗೂ’, ‘ಮಹಾರುದ್ರ’ ಸಿನಿಮಾದ ‘ಅಮ್ಮಾ ನೀನು’, ‘ಪರಿಚಯ’ ಸಿನಿಮಾದ ಹಾಡುಗಳನ್ನು ಜುಬೀನ್ ಗರ್ಗ್ ಹಾಡಿದ್ದಾರೆ.

ಖ್ಯಾತ ಗಾಯಕನ ನಿಧನಕ್ಕೆ ಹಲವಾರು ಸಂಗೀತಗಾರರು, ಸಂಗೀತ ನಿರ್ದೇಶಕರುಗಳು ಸಿನಿಮಾ ನಟ-ನಟಿಯರುಗಳು ಕಂಬನಿ ಮಿಡಿದಿದ್ದಾರೆ.



