Breaking
19 Sep 2026, Sat

ಆಸ್ತಿಗಾಗಿ ಆಟ ಆಡಿಸುವ ನೆಪದಲ್ಲಿ ಬಾಲಕಿಯನ್ನು ಕೊಂದು ಹಾಕಿದ ಮಲತಾಯಿ

ಬೀದರ್: ಆಟ ಆಡಿಸುವ ನೆಪದಲ್ಲಿ ಮಲತಾಯಿಯೊಬ್ಬಳು ಬಾಲಕಿಯನ್ನು ಟೆರಸ್ಗೆ ಕರೆದೊಯ್ದು ಮೂರನೇ ಮಹಡಿಯಿಂದ ತಳ್ಳಿ ಕೊಲೆ ಮಾಡಿರುವ ಘಟನೆ ಬೀದರ್ ನಗರದ ಆದರ್ಶ ಕಾಲೋನಿಯಲ್ಲಿ ನಡೆದಿದೆ.

ಮೃತ ಬಾಲಕಿಯನ್ನು 7 ವರ್ಷದ ಸಾನ್ವಿ ಹಾಗೂ ಆರೋಪಿ ತಾಯಿಯನ್ನು ರಾಧಾ ಎಂದು ಗುರುತಿಸಲಾಗಿದೆ.

ಆ ದಿನ ಎಲ್ಲರೂ ಸಾನ್ವಿ ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದಾಳೆ ಎಂದು ನಂಬಿದ್ದರು. ಈ ಕುರಿತು ಆ.28ರಂದು ಮೃತ ಬಾಲಕಿ ತಂದೆ ಸಿದ್ಧಾಂತ ಗಾಂಧಿಗಂಜ್ ಠಾಣೆಯಲ್ಲಿ ಆಕಸ್ಮಿಕ ಸಾವು ದೂರು ನೀಡಿದ್ದಾರೆ.

ಸೆ.12ರಂದು ಮೃತ ಬಾಲಕಿ ತಂದೆ ಸಿದ್ಧಾಂತಗೆ ಪಕ್ಕದ ಮನೆಯವರು ವಿಡಿಯೋವೊಂದನ್ನು ಕಳುಹಿಸಿದ್ದರು. ವಿಡಿಯೋದಲ್ಲಿ ಬಾಲಕಿ ಸಾವನ್ನಪ್ಪಿದ ದಿನ ಆಕೆಯ ಜೊತೆ ಮಲತಾಯಿ ರಾಧಾ ಅನುಮಾನಾಸ್ಪದವಾಗಿ ಓಡಾಡಿರುವುದು ಕಂಡುಬಂದಿದೆ.

ಈ ಸಿಸಿಟಿವಿ ದೃಶ್ಯ ನೋಡಿದಾಗ ವಿಷಯ ಬಹಿರಂಗವಾಗಿದ್ದು, ವಿಡಿಯೋ ಆಧರಿಸಿ ಬಾಲಕಿಯ ಅಜ್ಜಿ ಗಾಂಧಿಗಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೃತ ಸಾನ್ವಿ ತಾಯಿ ಖಾಯಿಲೆಗೆ ತುತ್ತಾಗಿ 6 ವರ್ಷಗಳ ಹಿಂದೆ ಸಾವನ್ನಪ್ಪಿದ್ದರು.

ಬಳಿಕ 2023ರಲ್ಲಿ ರಾಧಾ ಜೊತೆ ಸಿದ್ಧಾಂತ ಎರಡನೇ ವಿವಾಹವಾಗಿದ್ದು, ಅವರಿಗೆ ಎರಡು ಅವಳಿ ಮಕ್ಕಳಿವೆ. ಹೀಗಾಗಿ ಸಿದ್ಧಾಂತನ ಮೊದಲ ಮಗುವನ್ನು ಎರಡನೇ ಪತ್ನಿ ರಾಧಾ ಕೊಲೆ ಮಾಡಿದ್ದಾಳೆ ಎಂದು ಆರೋಪಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿ ರಾಧಾಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಆಸ್ತಿ ಇಬ್ಭಾಗ ಆಗುತ್ತದೆ ಎಂದು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ.

ಸದ್ಯ ಆರೋಪಿಯನ್ನು ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

Leave a Reply

Your email address will not be published. Required fields are marked *