ಕಾಸರಗೋಡು: ಕಾರು ಡಿಕ್ಕಿಯಾಗಿ ಆಟೋ ಚಾಲಕ ಸಾವನ್ನಪ್ಪಿದ ಘಟನೆ ಕಾಸರಗೋಡಿನ ಪೆರ್ಲ ಪೇಟೆಯ ಮುಖ್ಯರಸ್ತೆಯಲ್ಲಿ ಸೆ. 10 ರಂದು ರಾತ್ರಿಯ ವೇಳೆ ನಡೆದಿದೆ.
ಆಟೋ ಚಾಲಕ ನಾರಾಯಣ ಮೂಲ್ಯ (67) ಮೃತ ವ್ಯಕ್ತಿಯಾಗಿದ್ದಾರೆ.

ಇವರು ರಾತ್ರಿಯ ವೇಳೆ 10.30 ರ ಸುಮಾರಿಗೆ ಆಟೋ ಚಲಾಯಿಸಿಕೊಂಡು ಬರುತ್ತಿರುವಾಗ ಹಿಂದೆಯಿಂದ ಬಂದ ಕಾರೊಂದು ಡಿಕ್ಕಿಯಾಗಿತ್ತು ಎನ್ನಲಾಗಿದೆ. ಕಾರು ಗುದ್ದಿದ ರಭಸಕ್ಕೆ ರಿಕ್ಷಾ ಮಗುಚಿ ಬಿದ್ದಿದ್ದು, ಚಾಲಕನ ತಲೆಗೆ ತೀವ್ರ ಗಾಯವಾಗಿತ್ತು.
ಕೂಡಲೇ ಅವರನ್ನು ಕಾಸರಗೋಡು ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಇನ್ನು ರಿಕ್ಷಾದಲ್ಲಿದ್ದ ಸಹ ಪ್ರಯಾಣಿಕರಿಗೂ ತೀವ್ರ ಗಾಯಗಳಾಗಿದೆ. ಶೇಣಿ ಶಾಲಾ ಬಳಿ ರಿಕ್ಷಾ ಚಲಾಯಿಸುತ್ತಿದ್ದ ಇವರು ಮಣಿಯಂಪಾರೆ ನಿವಾಸಿಯಾದ ರೋಗಿಯೊಬ್ಬರನ್ನು ಪೆರ್ಲದ ಖಾಸಗೀ ಆಸ್ಪತ್ರೆಯೊಂದಕ್ಕೆ ಕರೆ ತಂದು ಹಿಂತಿರುಗುವ ವೇಳೆ ಈ ಅಪಘಾತ ಸಂಭವಿಸಿದೆ.

ಮೃತರು ಪತ್ನಿ ಗಿರಿಜಾ, ಮಕ್ಕಳಾದ ಯೋಗಿಶ, ಸುರೇಂದ್ರ, ಹರೀಶ, ಸೊಸೆಯಂದಿರಾದ ಶಾರದ, ಪುಷ್ಪಾ,ಗೀತಾ ಹಾಗೂ ಮೊಮ್ಮಕ್ಕಳು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.



