Breaking
23 Mar 2026, Mon

ಮಂಗಳೂರು ವಿಮಾನ ನಿಲ್ದಾಣದಲ್ಲಿ ಚಿನ್ನಾಭರಣ ಕಳವು ಪ್ರಕರಣ: ಐವರು ಆರೋಪಿಗಳ ಬಂಧನ

ಬಜ್ಪೆ: ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರ ಟ್ರೋಲಿ ಬ್ಯಾಗ್ ತೆರೆದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವುಗೈದಿರುವ ಪ್ರಕರಣದಲ್ಲಿ ನಾಲ್ವರು ಮಂದಿ ಸಿಬ್ಬಂದಿ ಸೇರಿ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿತಿನ್, ಸದಾನಂದ, ರಾಜೇಶ್, ಬಜ್ಪೆ ನಿವಾಸಿ ಪ್ರವೀಣ್ ಫೆರ್ನಾಂಡಿಸ್ ಮತ್ತು ವಿರಾಜ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧನಕ್ಕೆ ಒಳಗಾದವರು ಏರ್ ಇಂಡಿಯಾ ಎಕ್ಸ್ ಪ್ರೆಸ್ ನ ಲೋಡಿಂಗ್ ಅನ್ ಲೋಡಿಂಗ್ ಮಾಡುವ ಸಾಟ್ಸ್ ನೌಕರರಾಗಿದ್ದಾರೆ ಎಂದು ತಿಳಿದು ಬಂದಿದೆ.

ಸಿಆರ್ಪಿಎಫ್ ಜವಾನ ಹರಿಕೇಶ್ ಎಂಬವರು ಪತ್ನಿ ರಾಜೇಶ್ವರಿ ಪದ್ಮಶಾಲಿ ಅವರು ಆ.30ರಂದು ಬೆಂಗಳೂರಿನಿಂದ ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ಅವರ ಲಗೇಜ್ ಟ್ರೋಲಿ ಬ್ಯಾಗನ್ನು ತೆರದು 4.5 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಕಳವು ಮಾಡಲಾಗಿತ್ತು.

ಈ ಬಗ್ಗೆ ಪ್ರಕರಣ ದೂರು ದಾಖಲಿಸಿಕೊಂಡ ಬಜ್ಪೆ ಪೊಲೀಸ್ ನಿರೀಕ್ಷಕ ಸಂದೀಪ್ ಅವರು ತನಿಖೆ ಆರಂಭಿಸಿ ವಿಮಾನ ನಿಲ್ದಾಣದ ಲೋಡ್ ಮತ್ತು ಅನ್ ಲೋಡ್ ಮಾಡುತ್ತಿದ್ದ ನಾಲ್ಕು ಮಂದಿ ಸಿಬ್ಬಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ವೇಳೆ ಚಿನ್ನಾಭರಣ ಕದ್ದು ಬಜ್ಪೆ ಮೂಡುಪೆರಾರ ನಿವಾಸಿ ರವಿರಾಜ್ ಎಂಬಾತನಿಗೆ ಮಾರಿರುವುದಾಗಿ ತಪ್ಪೊಪ್ಪಿಕೊಂಡಿದ್ದರು.

ಆರೋಪಿಗಳ ಹೇಳಿಗೆ ಅನುಸರಿಸಿ ರವಿರಾಜ್ ನನ್ನು ಬಂಧಿಸಿದ ಪೊಲೀಸರು ಆತನ ಬಳಿಯಿಂದ ಮಹಿಳೆಯ ಚಿನ್ನಾಭರಣವನ್ನು ಕರಗಿಸಿ ಮಾಡಿದ್ದ ಸುಮಾರು 5 ಲಕ್ಷ ರೂ. ಮೌಲ್ಯದ ಚಿನ್ನದ ಗಟ್ಟಿಯನ್ನು ವಶಕ್ಕೆ ಪಡೆದುಕೊಂಡಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.

9 ವರ್ಷಗಳಿಂದ ಏರ್ ಇಂಡಿಯಾ ಸಂಸ್ಥೆಯ ಲೋಡ್ ಅನ್ ಲೋಡ್ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿರುವ ಆರೋಪಿಗಳು 2025ರ ಜನವರಿಯಲ್ಲಿ ಪ್ರಯಾಣಿಕರೊಬ್ಬರ ಟ್ರೋಲಿ ಬ್ಯಾಗ್ ನಿಂದ ಕಳವುಗೈದಿದ್ದ 2 ಲಕ್ಷ ರೂ. ಪೊಲೀಸರು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಕರಣ ಸಂಬಂಧ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

Leave a Reply

Your email address will not be published. Required fields are marked *