Breaking
23 Mar 2026, Mon

ಸೆ.9 ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ಪ್ರತಿಭಟನೆ

ಪುತ್ತೂರು: ತಾಲೂಕಿನ ಇರ್ದೆ ದೂಮಡ್ಕ-ಚಾಕೊಟೆ-ಮದಕ ಪರಿಶಿಷ್ಟ ಪಂಗಡದ ಸಂಪರ್ಕದ ರಸ್ತೆ ಮತ್ತು ಬಲ್ನಾಡು ಗ್ರಾಮದ ಕೋಂಕೆ ಪರಿಶಿಷ್ಟ ಪಂಗಡ ಕಾಲೊನಿಗೆ ಕಾಂಕ್ರೆಟ್ ರಸ್ತೆ ನಿರ್ಮಾಣ, ಕೋಂಕೆಯಲ್ಲಿ ತೋಡಿಗೆ ಸೇತುವೆ ನಿರ್ಮಾಣ ಹಾಗೂ ಆರ್ಯಾಪು ಗ್ರಾಪಂನ ಮೇಗಿನ ಪಂಜ ಪರಿಶಿಷ್ಟ ಪಂಗಡದ ಕುಟುಂಬಕ್ಕೆ 94ಸಿಸಿ ಹಕ್ಕು ಪತ್ರ ವಿತರಣೆಗೆ ಇಲಾಖೆಯ ಅಧಿಕಾರಿಗಳು ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಆಗಸ್ಟ್ 9ರಂದು ಪುತ್ತೂರಿನ ಅಮರ್ ಜವಾನ್ ಜ್ಯೋತಿ ಬಳಿಯಲ್ಲಿ ಪ್ರತಿಭಟನೆ ನಡೆಸಲಾಗುವುದು. ಮತ್ತೆಯೂ ಕ್ರಮ ಕೈಗೊಳ್ಳದಿದ್ದಲ್ಲಿ ತಾಲೂಕು ಆಡಳಿತ ಸೌಧಕ್ಕೆ ಬೀಗ ಜಡಿದು ಪ್ರತಿಭಟಿಸಲಾಗುವುದು ಎಂದು ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಗಿರಿಧರ್ ನಾಯ್ಕ್ ಎಚ್ಚರಿಕೆ ನೀಡಿದ್ದಾರೆ.

ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ ಅವರು ಇರ್ದೆ ಗ್ರಾಮದ ದೂಮಡ್ಕ-ಚಾಕೊಟೆ- ಮದಕ ದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ 13 ಮನೆಗಳಿಗೆ ಸರಿಯಾದ ರಸ್ತೆ ಇಲ್ಲದ ಕಾರಣ ತಮ್ಮ ಸ್ವಂತ ಖರ್ಚಿನಲ್ಲಿ ಕಚ್ಚಾ ರಸ್ತೆ ನಿರ್ಮಾಣ ಮಾಡಿದ್ದಾರೆ.ಈ ರಸ್ತೆಯನ್ನು ತಕ್ಷಣವೇ ಕಾಂಕ್ರಿಟೀಕರಣಗೊಳಿಸಬೇಕು. ಇಲ್ಲಿ ರಸ್ತೆ ನಿರ್ಮಾಣ ಮಾಡಲು ಮುಂದಾದ 14 ಮಂದಿಯ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ ಈ ಕೇಸನ್ನು ಹಿಂಪಡೆಯಬೇಕು. ಬಲ್ನಾಡು ಗ್ರಾಮದ ಕೋಂಕೆಯಲ್ಲಿ 6 ಪರಿಶಿಷ್ಟ ಪಂಗಡದ ಮನೆಗಳಿದ್ದು ಇಲ್ಲಿಗೆ ಸಂಪರ್ಕ ರಸ್ತೆಯನ್ನು ನಿರ್ಮಿಸಬೇಕು ಹಾಗೂ ಇಲ್ಲಿನ ತೋಡಿಗೆ ಸೇತುವೆ ನಿರ್ಮಾಣ ಮಾಡಬೇಕು ಎಂಬುದು ಬಹುಕಾಲದ ಬೇಡಿಕೆಯಾಗಿದೆ. ಆದರೆ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಅಲ್ಲದೆ ಆರ್ಯಾಪು ಗ್ರಾಮದ ಮೇಗಿನ ಪಂಜ ಎಂಬಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಮನೆಗಳಿಗೆ ಇನ್ನೂ 94ಸಿಸಿ ಮಂಜೂರುಗೊಳಿಸಿಲ್ಲ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಅಗ್ರಹಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ತಿಳಿಸಿದರು.

ಸುದ್ಧಿಗೋಷ್ಠಿಯಲ್ಲಿ ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆಯ ಮುಖಂಡರಾದ ನಮಿತಾ, ಕೃಷ್ಣಪ್ಪ ನಾಯ್ಕ, ಪೂರ್ಣಿಮಾ ಮತ್ತು ದೇವಕಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *