ಮಂಗಳೂರು: ದ್ವಿಚಕ್ರ ವಾಹನ ಸ್ಕಿಡ್ ಆಗಿ ಸವಾರ ರಸ್ತೆಗೆ ಬಿದ್ದಿದ್ದು ಬಸ್ ಚಾಲಕನ ಸಮಯಪ್ರಜ್ಞೆಯಿಂದ ಅನಾಹುತ ತಪ್ಪಿದ ಘಟನೆ ಮಂಗಳೂರಿನ ನಂತೂರು ಜಂಕ್ಷನ್ನಲ್ಲಿ ಆಗಸ್ಟ್ 30 ರಂದು ನಡೆದಿದೆ.
ನಗರದ ಕೆಪಿಟಿಯಿಂದ ನಂತೂರು ಕಡೆಗೆ ರಾಜಲಕ್ಷ್ಮಿ ಬಸ್ ಅನ್ನುವ ಬಸ್ ಸಂಚರಿಸುತ್ತಿದ್ದು ಅದನ್ನು ಶಶಿಧರ್ ಶೆಟ್ಟಿ ಎಂಬ ಚಾಲಕ ಚಲಾಯಿಸುತ್ತಿದ್ದರು. ಇದೇ ವೇಳೆ ವೇಗವಾಗಿ ಬಂದ ಸ್ಕೂಟಿಯೊಂದು ರಸ್ತೆಯಲ್ಲಿದ್ದ ದೊಡ್ಡ ಗುಂಡಿಗೆ ಡಿಕ್ಕಿ ಹೊಡೆದು ಸ್ಕಿಡ್ ಆಗಿ ಸವಾರ ರಸ್ತೆಗೆ ಬಿದ್ದಿದ್ದಾನೆ.

ಈ ವೇಳೆ ಸ್ಕೂಟಿ ಹಿಂದೆ ಬರುತ್ತಿದ್ದ ಚಾಲಕ ಶಶಿಧರ್ ಅವರು ಸಮಯಕ್ಕೆ ಸರಿಯಾಗಿ ಬ್ರೇಕ್ ಹಾಕುವ ಮೂಲಕ ಸಂಭವನೀಯ ದುರಂತವನ್ನು ತಪ್ಪಿಸಿದ್ದಾರೆ.

ಘಟನೆಯಲ್ಲಿ ಸ್ಕೂಟರ್ ಸವಾರ ಸಣ್ಣಪುಟ್ಟ ಗಾಯಗೊಂದಿಗೆ ಪಾರಾಗಿದ್ದು, ಸ್ಕೂಟರ್ನಲ್ಲೇ ಸ್ಥಳದಿಂದ ತೆರಳಿದ್ದಾನೆ. ಇದೇ ವೇಳೆ ಹಿಂದಿನಿಂದ ಬಂದ ಕಾರೊಂದು ಬಸ್ಸಿಗೆ ಢಿಕ್ಕಿ ಹೊಡೆದಿದ್ದು, ಕಾರಿನ ಮುಂಭಾಗ ಹಾಗೂ ಬಸ್ಸಿನ ಹಿಂಭಾಗ ಜಖಂಗೊಂಡಿದೆ.
ಈ ಗುಂಡಿಗಳು ವಾಹನ ಸವಾರರ ಜೀವಕ್ಕೆ ಅಪಾಯವನ್ನುಂಟು ಮಾಡುತ್ತಿದ್ದು, ರಸ್ತೆಗಳನ್ನು ದುರಸ್ತಿ ಮಾಡಲು ಅಧಿಕಾರಿಗಳು ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಈ ಘಟನೆಯ ವಿಡಿಯೋ ಬಸ್ ನ ಡ್ಯಾಶ್-ಕ್ಯಾಮರದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


