ಮಹಾರಾಷ್ಟ್ರ: ಹುಟ್ಟು ಹಬ್ಬ ಆಚರಿಸುತ್ತಿದ್ದಾಗ ನಾಲ್ಕು ಅಂತಸ್ತಿನ ಹಳೆಯ ಕಟ್ಟಡವೊಂದು ಕುಸಿದು ಬಿದ್ದು ಒಂದು ವರ್ಷದ ಮಗು ಸೇರಿದಂತೆ 15 ಮಂದಿ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರ ಪಾಲ್ಘರ್ ಜಿಲ್ಲೆಯ ವಿರಾರ್ ನಲ್ಲಿ ನಡೆದಿದೆ.

ಇಲ್ಲಿನ ವಿಜಯ್ ನಗರದಲ್ಲಿರುವ ರಮಾಬಾಯಿ ಅಪಾರ್ಟ್ಮೆಂಟ್ನ ಒಂದು ಭಾಗ ಕುಸಿದು ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಆರೋಹಿ ಜೋಯಲ್ ಮತ್ತು ಓಂಕಾರ್ ಜೋಯಲ್ ದಂಪತಿಯ ಒಂದು ವರ್ಷದ ಮಗಳಾದ ಉತ್ಕರ್ಷ ಜೋಯಲ್ ನ ಹುಟ್ಟುಹಬ್ಬ ವಾಗಿದ್ದರಿಂದ ದಂಪತಿ ಮಂಗಳವಾರ ಮಧ್ಯರಾತ್ರಿ ಸುಮಾರು 12:05 ರ ವೇಳೆಗೆ ಮಗಳ ಮೊದಲ ವರ್ಷದ ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದರು.

ಈ ವೇಳೆ ಏಕಾಏಕಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ಬಿದ್ದಿದ್ದು ಘಟನೆಯಲ್ಲಿ ಒಂದು ವರ್ಷದ ಮಗು, ತಾಯಿ ಸೇರಿದಂತೆ ಹದಿನೈದು ಮಂದಿ ಜೀವ ಕಳೆದುಕೊಂಡಿದ್ದು ತಂದೆ ಓಂಕಾರ್ ಜೋಯಲ್ ನಾಪತ್ತೆಯಾಗಿದ್ದಾರೆ.
ಮನೆಯ ಗೋಡೆಗಳಲ್ಲಿ ಬಲೂನ್ ಗಳನ್ನು ಹಾಕಿ ಅಲಂಕಾರ ಮಾಡಿರುವುದು ಕಂಡುಬಂದಿದ್ದು, ಜೊತೆಗೆ ಅವರ ಮೊಬೈಲ್ ನಲ್ಲಿ ಹುಟ್ಟು ಹಬ್ಬ ಆಚರಿಸಿರುವ ಫೋಟೋಗಳು ಕಂಡು ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯಲ್ಲಿ ಹಲವು ಮಂದಿ ಗಾಯಗೊಂಡಿದ್ದು ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು ಇನ್ನೂ ಕೆಲವರು ನಾಪತ್ತೆಯಾಗಿದ್ದು ರಕ್ಷಣಾ ತಂಡ ಅವಶೇಷಗಳಡಿ ಶೋಧ ಕಾರ್ಯ ನಡೆಸಲಾಗುತ್ತಿದೆ. 2012 ರಲ್ಲಿ ಅಕ್ರಮವಾಗಿ ನಿರ್ಮಿಸಲಾದ ಈ ಕಟ್ಟಡದಲ್ಲಿ 50 ಮನೆಗಳಿದ್ದು. ಈ ಕಟ್ಟಡದ ಹಿಂಭಾಗ ಕುಸಿದಿದ್ದು ಇಲ್ಲಿ ಹನ್ನೆರಡು ಕುಟುಂಬಗಳು ವಾಸವಾಗಿತ್ತು.

ಘಟನೆ ನಡೆದು 30 ಗಂಟೆಗಳು ಕಳೆದರೂ ಇನ್ನೂ ರಕ್ಷಣಾ ಕಾರ್ಯ ಮುಂದುವರೆದಿದೆ. ಸ್ಥಳದಲ್ಲಿ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ ಮತ್ತು ಅಗ್ನಿಶಾಮಕ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ ಎಂದು ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.



