Breaking
22 Mar 2026, Sun

ಸೌಜನ್ಯಾ ಪರ ಹೋರಾಟಗಾರ ತಿಮರೋಡಿ ಮನೆಯಲ್ಲಿ ಮಾಸ್ಕ್ ಮ್ಯಾನ್ ಚಿನ್ನಯ್ಯ ಬಳಸುತ್ತಿದ್ದ ಪೋನ್ ವಶಕ್ಕೆ

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹಗಳನ್ನು ಹೂತು ಹಾಕಿರುವ ಆರೋಪದ ತನಿಖೆ ಮುಂದುವರೆದಿದ್ದು,ಇದರ ಮುಂದುವರಿದ ಭಾಗವಾಗಿ ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಯವರ ಮನೆಯಲ್ಲಿ ಎಸ್ ಐಟಿ ಅಧಿಕಾರಿಗಳು ಇಂದು ಶೋಧ ಕಾರ್ಯ ನಡೆಸಿದ್ದಾರೆ.

ಈ ವೇಳೆ ಸಿಸಿಟಿವಿ ಮತ್ತು ಚಿನ್ನಯ್ಯ ಬಳಸುತ್ತಿದ್ದ ಫೋನನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ ಅಂತ ಹೇಳಲಾಗುತ್ತಿದೆ.

ಸದ್ಯ ಪ್ರಕರಣಕ್ಕೆ ಸಂಬಂಧಿಸಿ ಎಸ್ಐಟಿ ವಶದಲ್ಲಿರುವ ಸಾಕ್ಷಿ ದೂರುದಾರನನ್ನು ಚಿನ್ನಯ್ಯ ಈ ಹಿಂದೆ ತಂಗಿದ್ದ ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಯವರ ಮನೆಗೆ ಕರೆದೊಯ್ದ ಎಸ್ ಐಟಿ ಸ್ಥಳ ಮಹಜರು ಕಾರ್ಯ ಮಾಡುತ್ತಿದೆ.

ಈ ವೇಳೆ ತಿಮರೋಡಿ ಮನೆಯಲ್ಲಿದ್ದ ದೂರುದಾರನಿಗೆ ಸಂಬಂಧಿಸಿದ ವಸ್ತುಗಳೆಲ್ಲವನ್ನೂ ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆಯುವ ಕಾರ್ಯ ಮಾಡುತ್ತಿದ್ದಾರೆ ಎನ್ನಲಾಗಿದೆ. ಆತ ಬಳಸುತ್ತಿದ್ದ ಮೊಬೈಲ್ ಫೋನ್ ಹಾಗೂ ಇತರ ವಸ್ತುಗಳನ್ನು ಎಸ್ಐಟಿ ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ.

ಎಸ್ಐಟಿ ಉತ್ಕನನ ನಡೆಸಿದ ಬಳಿಕ ತಾನು ತಿಮರೋಡಿಯ ನಿವಾಸಕ್ಕೆ ಹೋಗುತ್ತಿದ್ದೆ. ಅಲ್ಲಿ ನನಗೆ ಒಂದು ಕೊಠಡಿಯನ್ನು ನೀಡಲಾಗಿತ್ತು. ಅಲ್ಲಿ ನಾನು ಬಟ್ಟೆ, ಬ್ಯಾಗ್ ಇಟ್ಟಿದ್ದೇನೆ. ನಾನು ಮೊಬೈಲ್ ಬಳಸುತ್ತಿರಲಿಲ್ಲ. ನನ್ನ ಮೊಬೈಲ್ ತಿಮರೋಡಿ ಕಡೆಯವರ ಜೊತೆ ಇತ್ತು ಎಂದು ಚಿನ್ನಯ್ಯ ಹೇಳಿದ್ದ. ಈ ಕಾರಣಕ್ಕೆ ಕೊಠಡಿಯ ಮಹಜರು ನಡೆಸಿ ಮೊಬೈಲ್ ಮತ್ತು ಬಟ್ಟೆಗಳನ್ನು ವಶಕ್ಕೆ ಪಡೆದಿದೆ

ಸದ್ಯ ಸಾಕ್ಷಿ ದೂರುದಾರನ ಬಂಧನವಾಗಿರುವುದರಿಂದ ಆತ ಉಪಯೋಗಿಸುತ್ತಿದ್ದ ಮೊಬೈಲ್ ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಂಡು ಮಹಜರು ನಡೆಸಬೇಕಾಗಿದೆ. ಅದೇರೀತಿ ಆತ ವಾಸಿಸುತ್ತಿದ್ದ ಮನೆಯಲ್ಲಿ ಪರಿಶೀಲನೆ ನಡೆಸಿ ಮಹಜರು ಮಾಡಬೇಕಾಗಿದ್ದು, ಅದರಂತೆ ಎಸ್ಐಟಿ ಅಧಿಕಾರಿಗಳು ಬೆಳ್ತಂಗಡಿ ಪೊಲೀಸರ ಸಹಕಾರದಲ್ಲಿ ಸರ್ಚ್ ವಾರೆಂಟ್ ನೊಂದಿಗೆ ಮಹೇಶ್ ಶೆಟ್ಟಿ ತಿಮರೋಡಿಯ ಮನೆಗೆ ಬೆಳಗ್ಗೆ ತೆರಳಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *