ಚಿಕ್ಕಮಗಳೂರು: ಚಿನ್ನಕ್ಕಾಗಿ ಸೊಸೆಯೊಬ್ಬಳು ಪ್ರಿಯಕರನ ಜೊತೆ ಸೇರಿಕೊಂಡು ರಾಗಿ ಮುದ್ದೆಯಲ್ಲಿ ನಿದ್ರೆ ಮಾತ್ರೆ ಬೆರೆಸಿ ಅತ್ತೆಯನ್ನೇ ಕೊಲೆಗೈದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ತಡಗ ಗ್ರಾಮದಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ದೇವಿರಮ್ಮ ಎಂದು ಗುರುತಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಸೊಸೆ ಅಶ್ವಿನಿ ಹಾಗೂ ಪ್ರಿಯಕರ ಆಂಜನೇಯನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಆರೋಪಿಗಳಿಂದ ಕಳವುಗೈದ 218 ಗ್ರಾಂ ಚಿನ್ನ, ಹಾಗೂ 16 ಲಕ್ಷ ಮೌಲ್ಯದ ಟಿಟಿ ವಾಹನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಆಗಸ್ಟ್ 10ರಂದು ಸೊಸೆ ಅಶ್ವಿನಿ ಅವರ ಅತ್ತೆ ದೇವಿರಮ್ಮ ಮೃತಪಟ್ಟಿದ್ದರು ಸಹಜ ಸಾವು ಎಂದುಕೊಂಡು ಕುಟುಂಬಸ್ಥರು ಅಂತ್ಯಸಂಸ್ಕಾರ ಮಾಡಿದ್ದಾರೆ.

ಇದಾಗಿ ಕೆಲವೇ ದಿನಗಳಲ್ಲಿ ಮನೆಯಲ್ಲಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಾಣೆಯಾಗಿತ್ತು. ಇದರಿಂದ ಗಾಬರಿಗೊಂಡ ಮನೆಮಂದಿ ಚಿನ್ನಕ್ಕಾಗಿ ಹುಡುಕಾಡಿದ್ದಾರೆ ಆದರೆ ಎಲ್ಲೂ ಪತ್ತೆಯಾಗಿಲ್ಲ.
ಬಳಿಕ ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದರ ತನಿಖೆ ನಡೆಸುವ ವೇಳೆ ಮನೆ ಮಂದಿಯನ್ನು ವಿಚಾರಣೆ ನಡೆಸಿದಾಗ ಸೊಸೆ ಅಶ್ವಿನಿ ಪೊಲೀಸರನ್ನೇ ದಾರಿ ತಪ್ಪಿಸುವ ಹೇಳಿಕೆಗಳನ್ನು ನೀಡಿದ್ದಾಳೆ.

ಇದರಿಂದ ಅನುಮಾನಗೊಂಡ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದ ವೇಳೆ ಚಿನ್ನಾಭರಣ ಕಳವು ಮಾಡಿದ್ದನ್ನು ಒಪ್ಪಿಕೊಂಡಿದ್ದಾಳೆ.
ತನಿಖೆಯ ವೇಳೆ ಆಕೆ ಮತ್ತೊಂದು ವಿಚಾರ ಬಾಯಿಬಿಟ್ಟಿದ್ದು ತಾನು ತನ್ನ ಪ್ರಿಯಕರನ ಜೊತೆ ಸೇರಿಕೊಂಡು ಕೊಲೆ ಮಾಡಿದ್ದೇನೆ . ಅಲ್ಲದೆ ಮನೆಯಲ್ಲಿದ್ದ ಸುಮಾರು 20 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿ ಪ್ರಿಯಕರನಿಗೆ ನೀಡಿರುವುದಾಗಿ ಒಪ್ಪಿಕೊಂಡಿದ್ದಾಳೆ.



