ಶಿವಮೊಗ್ಗ: ಶಿವಮೊಗ್ಗ ಶಿಕಾರಿಪುರ ರೈಲ್ವೆ ಯೋಜನೆಯ ಕೆಲಸ ಈಗಾಗಲೇ ಆರಂಭವಾಗಿದೆ. 2026 ರೊಳಗೆ ಶಿವಮೊಗ್ಗ ಶಿಕಾರಿಪುರ ಕಾಮಗಾರಿ ಪೂರ್ಣಗೊಳಿಸುತ್ತೇವೆ ಎಂದು ಕೇಂದ್ರ ಸಚಿವ ವಿ ಸೋಮಣ್ಣ ಹೇಳಿದರು.
ಶಿವಮೊಗ್ಗದಲ್ಲಿ ರೈಲ್ವೆ ಯೋಜನೆಗಳ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಕೋಟೆ ಗಂಗೂರಿನಲ್ಲಿ ಕೋಚಿಂಗ್ ಡಿಪೋ ಕಾಮಗಾರಿಗೆ ಚಾಲನೆ ನೀಡಿದ್ದೇನೆ. ಮುಂದಿನ ಜೂನ್ನಲ್ಲಿ ಈ ಕಾಮಗಾರಿ ಮುಗಿಸುತ್ತೇವೆ ಎಂದರು. ಮೋದಿ ಮೂರನೇ ಬಾರಿ ಪ್ರಧಾನಿಯಾದ ಮೇಲೆ ರೈಲ್ವೆ ಇಲಾಖೆ ಐತಿಹಾಸಿಕ ಕಾರ್ಯಗಳನ್ನು ಮಾಡುತ್ತಿದೆ. ಕರ್ನಾಟಕದಲ್ಲಿ ಕೋಚಿಂಗ್ ಡಿಪೋ ಸಿದ್ಧವಾಗುತ್ತಿದ್ದು, ಶಿವಮೊಗ್ಗದಲ್ಲೇ ಆಗುತ್ತಿರುವುದು ಗಮನಾರ್ಹ ಎಂದು ಸೋಮಣ್ಣ ಹೇಳಿದರು.
ರೈಲ್ವೆ ಕೋಚಿಂಗ್ ಡಿಪೋ ಕಾಮಗಾರಿ ವೀಕ್ಷಣೆ ಮಾಡಿದ ಬಳಿಕ ಅವರು ಪ್ರತಿಕ್ರಿಯೆ ನೀಡಿದರು. ರೈಲ್ವೆ ಇಲಾಖೆಯಲ್ಲಿ ಕಳಪೆ ಕಾಮಗಾರಿ ಸಹಿಸಲ್ಲ. ರೈಲ್ವೆ ಇಲಾಖೆ ಎಂಬುದು ರಕ್ಷಣಾ ಇಲಾಖೆ ಇದ್ದ ಹಾಗೆ. ಇನ್ನು ಎರಡರಿಂದ ಮೂರು ತಿಂಗಳಲ್ಲಿ ವಂದೇ ಭಾರತ್ ರೈಲು ಶಿವಮೊಗ್ಗಕ್ಕೆ ಬರಲಿದೆ ಎಂದು ಅವರು ಹೇಳಿದರು.
ಶಿವಮೊಗ್ಗ ನಗರದ ಹೊರವಲಯದಲ್ಲಿರುವ ಕೋಟೆ ಗಂಗೂರಿನಲ್ಲಿ ರೈಲ್ವೆ ಕೋಚಿಂಗ್ ಡಿಪೋ ನಿರ್ಮಾಣ ಆಗುತ್ತಿದೆ. ಸುಮಾರು 100 ಕೋಟಿ ರೂಪಾಯಿ ವೆಚ್ಚದಲ್ಲಿ ರೈಲ್ವೆ ಕೋಚಿಂಗ್ ಡಿಪೋ ಕಾಮಗಾರಿ ನಡೆಯುತ್ತಿದೆ. ರೈಲ್ವೆ ಅಧಿಕಾರಿಗಳೊಂದಿಗೆ ಕಾಮಗಾರಿ ವಿಕ್ಷಣೆ ಮಾಡಿದ ಸೋಮಣ್ಣಗೆ ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಶಾಸಕ ಚನ್ನಬಸಪ್ಪ, ಎಂಎಲ್ಸಿ ಡಿಎಸ್ ಅರುಣ್, ಡಾ. ಧನಂಜಯ ಸರ್ಜಿ ಸಾಥ್ ನೀಡಿದರು.