ಮಂಗಳೂರು: ನೌಕರರ ಪಿಂಚಣಿ ಹಾಗೂ ಗ್ರಾಚುಟಿಗೆ ನಮ್ಮ ವಿರೋಧವಿಲ್ಲ, ಖಂಡಿತವಾಗಿಯೂ ಅವರಿಗೆ ನೀಡಲೇಬೇಕು. ಅದು ರಾಜ್ಯ ಸರ್ಕಾರದ ಜವಾಬ್ದಾರಿ ಹೊರತು ಜನಸಾಮಾನ್ಯರದ್ದಲ್ಲ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದ್ದಾರೆ.

ವಿದ್ಯುತ್ ಸರಬರಾಜು ನಿಗಮಗಳ ನೌಕರರಿಗೆ ಪಿಂಚಣಿ ಹಾಗೂ ಗ್ರಾಚ್ಯುಟಿ ನೀಡಲು, ಗ್ರಾಹಕರಿಂದಲೇ ಹಣ ವಸೂಲಿ ಮಾಡುವ ಮೂಲಕ ಹಗಲು ದರೋಡೆಗೆ ರಾಜ್ಯ ಕಾಂಗ್ರೆಸ್ ಸರ್ಕಾರದ ಇಳಿದಿದೆ ಎಂದು ಆರೋಪಿಸಿ ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲ ವತಿಯಿಂದ ಮರೋಳಿ-ಜೋಡುಕಟ್ಟೆ ಬಳಿ ಇರುವ ಮೆಸ್ಕಾಂ ಕಚೇರಿ ಮುಂಭಾಗದಲ್ಲಿ ಆಯೋಜಿಸಲಾಗಿದ್ದ ಬೃಹತ್ ಪ್ರತಿಭಟನೆ ಉದ್ದೇಶಿಸಿ ಅವರು ಮಾತನಾಡಿದರು.

ಸರ್ಕಾರ ತನ್ನ ಮೇಲಿನ ಹೊಣೆಯನ್ನು ಗ್ರಾಹಕರ ಮೇಲೆ ಹೊರಿಸಿದ್ದರಿಂದ ಸಹಜವಾಗಿ ಜನರು ಆಕ್ರೋಶಗೊಂಡಿದ್ದಾರೆ. ಯೂನಿಟಿಗೆ 36 ಪೈಸೆ ಹೆಚ್ಚಳದಂತೆ ಪ್ರತಿ ಮನೆಯಿಂದ ನೂರಾರು, ಸಾವಿರಾರು ರೂಪಾಯಿ ವಸೂಲಿ ಮಾಡಿ ಕೋಟ್ಯಂತರ ರೂಪಾಯಿಗಳನ್ನು ದೋಚುವ ಹುನ್ನಾರ ನಡೆದಿದೆ.

ಈಗಾಗಲೇ ವಿದ್ಯುತ್ ದರ ಹೆಚ್ಚಳ ಮಾಡಿ ಜನರನ್ನು ಸಂಕಷ್ಟಕ್ಕೆ ದೂಡಲಾಗಿದೆ.
ಎರಡು ಸಾವಿರಕ್ಕೆ ಸಿಗುತ್ತಿದ್ದ ಸ್ಮಾರ್ಟ್ ಮೀಟರನ್ನು ಹತ್ತು ಸಾವಿರಕ್ಕೆ ಏರಿಕೆ ಮಾಡಿ ಹೈಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಂಡಿದೆ. ಆದರೂ ಈ ಕಾಂಗ್ರೆಸ್ ಸರ್ಕಾರ ಬುದ್ಧಿ ಕಲಿತಿಲ್ಲ. ಜನರು ತಿರುಗಿ ಬಿದ್ದರೆ ಮಾತ್ರ ಈ ದಪ್ಪ ಚರ್ಮದ ಸರ್ಕಾರಕ್ಕೆ ಬುದ್ಧಿ ಬರುವುದಾದರೆ ಜನತೆಯೇ ಪಾಠ ಕಲಿಸಲು ಸಿದ್ಧವಾಗಬೇಕು.

ಜನಪರ ಹೋರಾಟಕ್ಕೆ ಬಿಜೆಪಿ ಸದಾ ಬೆಂಬಲ ನೀಡುತ್ತದೆ ಎಂದರು.



