ಧರ್ಮಸ್ಥಳ: ಗ್ರಾಮದಲ್ಲಿ ವ್ಯಕ್ತಿಯೊಬ್ಬ ಶವ ಹೂತು ಹಾಕಿರುವ ಪ್ರಕರಣದ ತನಿಖೆ ಇಂದು ಮತ್ತೆ ಮುಂದುವರೆಯಲಿದ್ದು, ಅನಾಮಿಕ ಗುರುತಿಸಿದ 11ನೇ ಸ್ಥಳದಲ್ಲಿ ಕಳೇಬರಕ್ಕಾಗಿ ಶೋಧ ಕಾರ್ಯ ನಡೆಯಲಿದೆ ಎಂದು ತಿಳಿದು ಬಂದಿದೆ.
ಈಗಾಗಲೇ 10 ಪಾಯಿಂಟ್ಗಳಲ್ಲಿ ಶೋಧ ಕಾರ್ಯ ನಡೆದಿದೆ. ನಿನ್ನೆ ಭಾನುವಾರ ಆಗಿದ್ದರಿಂದ ರಿಲ್ಯಾಕ್ಸ್ ಗೆ ಜಾರಿದ್ದ ಎಸ್ಐಟಿ ತಂಡ, ಇವತ್ತು ಮತ್ತೆ ಮಹಜರು ಪ್ರಕ್ರಿಯೆ ಆರಂಭಿಸಲಿದೆ.

ಇವತ್ತು 3 ಪಾಯಿಂಟ್ಗಳಲ್ಲಿ ಎಸ್ಐಟಿ ಕಾರ್ಯಾಚರಣೆಯನ್ನು ನಡೆಸಲಿದ್ದು ತೀವ್ರ ಕುತೂಹಲ ಮೂಡಿಸಿದೆ. ಜು.29ನೇ ತಾರೀಖಿನಿಂದ ಮಹಜರು ಪ್ರಕ್ರಿಯೆ ಶುರುವಾಗಿದ್ದು, ಅಧಿಕಾರಿಗಳ ಇವತ್ತಿನ ಕಾರ್ಯಾಚರಣೆ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
ಈ ನಿಟ್ಟಿನಲ್ಲಿ ಈಗಾಗಲೇ ಶೋಧ ಕಾರ್ಯ ನಡೆದ ಸ್ಥಳ ಹಾಗೂ ಮುಂದೆ ಶೋಧ ನಡೆಸಲಿರುವ 11, 12 ಮತ್ತು 13ನೇ ಸ್ಥಳಕ್ಕೆ ಯಾರೂ ತೆರಳದಂತೆ ಬಂದೋಬಸ್ತ್ ಮಾಡಲಾಗಿದೆ. ಪೊಲೀಸ್ ಹಾಗೂ ನಕ್ಸಲ್ ನಿಗ್ರಹ ಪಡೆ ಈ ಸ್ಥಳದಲ್ಲಿ ಕಾವಲು ಕಾಯುತ್ತಿದೆ ಅನ್ನುವ ಮಾಹಿತಿ ಇದೆ.

ಈ ಮಧ್ಯೆ ಎಸ್ಐಟಿ ತನಿಖಾಧಿಕಾರಿ ಮಂಜುನಾಥ್ ಗೌಡ ಅವರ ಮೇಲೆಯೇ ಅನಾಮಿಕ ದೂರು ನೀಡಿದ್ದರಿಂದ ಅವರು ಕಾರ್ಯಾಚರಣೆಯಲ್ಲಿ ನೇರವಾಗಿ ಭಾಗವಹಿಸದೆ ಕಚೇರಿಯಲ್ಲಿಯೇ ಇರುವ ಸಾಧ್ಯತೆಯೂ ಇದೆ.
ಇತ್ತ ಈ ಕೇಸ್ ಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು ಧರ್ಮಸ್ಥಳ ಗ್ರಾಮದಲ್ಲಿ ಸುಮಾರು 15 ವರ್ಷಗಳ ಹಿಂದೆ ಕೊಲೆ ನಡೆದಿರುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ ಎಂದು ಜಯಂತ್ ಟಿ ಎಂಬವರು ಆ. 2ರಂದು ಎಸ್ಐಟಿ ಕಚೇರಿಗೆ ದೂರು ನೀಡಲು ಆಗಮಿಸಿದ್ದರು. ಇದೀಗ ಆ. 4ರಂದು ಅವರ ಪ್ರಕರಣದ ತನಿಖೆಯೂ ಆರಂಭವಾಗುವ ಸಾಧ್ಯತೆ ಇದೆ.



