Breaking
19 Sep 2026, Sat

ಉಳ್ಳಾಲ: ಸರಕಾರಿ ಬಸ್ ಕಂಡಕ್ಟರ್‌ನ ಜೀವ ಉಳಿಸಿದ ಡ್ರೈವರ್‌ಗೆ ಸನ್ಮಾನ

ಉಳ್ಳಾಲ: ಚಲಿಸುತ್ತಿದ್ದ ಸರಕಾರಿ ಬಸ್ ನಲ್ಲಿ ಟಿಕೆಟ್‌ ತೆಗೆಯುತ್ತಿದ್ದ ವೇಳೆ ಪ್ರಜ್ಞೆ ತಪ್ಪಿ ಬಿದ್ದ ನಿರ್ವಾಹಕನನ್ನು ಜೀರೋ ಟ್ರಾಫಿಕ್ ಮಾದರಿಯಲ್ಲಿ ಆಸ್ಪತ್ರೆಗೆ ಕರೆತಂದು ಜೀವ ಉಳಿಸಿದ ಬಸ್‌ ಚಾಲಕನಿಗೆ ದೇರಳಕಟ್ಟೆಯ ಕಣಚೂರು ಆಸ್ಪತ್ರೆಯ ವತಿಯಿಂದ ಸನ್ಮಾನ ಮಾಡಲಾಯಿತು.

ಆ.1 ರಂದು ಬೆಳಿಗ್ಗೆ 8 ಗಂಟೆಗೆ ಮುಡಿಪುವಿನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಸರಕಾರಿ ಬಸ್ ನಲ್ಲಿ ಬಸ್ ನಿರ್ವಾಹಕ ಸಂಜೀವ್ ಪ್ರಯಾಣಿಕರಿಗೆ ಟಿಕೆಟ್ ನೀಡುತ್ತಾ ಬರುತ್ತಿದ್ದರು. ಬಸ್‌ ಕಂಬಳಪದವು ತಲುಪುತ್ತಿದ್ದಂತೆಯೇ ಕಂಡೆಕ್ಟರ್‌ಗೆ ತಲೆ ಸುತ್ತಿದ ಹಾಗಾಗಿ, ಕಣ್ಣಲ್ಲಿ ನೀರು ಬರಲಾರಂಭಿಸಿದೆ. ಆ ಬಳಿಕ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.
ನಿರ್ವಾಹಕನ ಚಿಂತಾಜನಕ ಸ್ಥಿತಿ ಕಂಡ ಅದೇ ಬಸ್ಸಿನ ಚಾಲಕ ಅವೀಶ್ ಮದರನ್ ಬಸ್ ಅನ್ನು ಕಂಬಳ ಪದವಿನಿಂದ ಕೂಡಲೇ ದೇರಳಕಟ್ಟೆ ಕಣಚೂರು ಆಸ್ಪತ್ರೆ ತನಕ ಜೀರೋ ಟ್ರಾಫಿಕ್ ಮಾದರಿಯಲ್ಲಿ ತಂದು ಆಸ್ಪತ್ರೆಯ ಎಮರ್ಜೆನ್ಸಿ ದ್ವಾರದ ಬಳಿ ನಿಲ್ಲಿಸಿ, ತಕ್ಷಣ ಚಿಕಿತ್ಸೆಗೆ ಕರೆದೊಯ್ದಿದ್ದಾರೆ. ಚಾಲಕನ ಸಮಯ ಪ್ರಜ್ಞೆಯಿಂದ ನಿರ್ವಾಹಕನ ಜೀವ ಉಳಿದಿದ್ದು ಇವರ ಈ ಕಾರ್ಯಕ್ಕೆ ಸ್ಥಳೀಯರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಈ ವಿಚಾರ ತಿಳಿದ ಆಸ್ಪತ್ರೆಯ ಚೇರ್ ಮೆನ್ ಡಾ. ಯು. ಕೆ. ಮೋನು ಕಣಚೂರು ಅವರು ಚಾಲಕ ಅವೀಶ್ ಮದರನ್ ಅವರಿಗೆ ಸನ್ಮಾನಿಸಲು ನಿರ್ಧರಿಸಿ ಸೂಚನೆ ನೀಡಿದ್ದರು. ಅವರ ಸೂಚನೆ ಮೇರೆಗೆ ಆಸ್ಪತ್ರೆಯ ಪ್ರಮುಖರಾದ ಡಾ. ಇಸ್ಮಾಯಿಲ್ ಹೆಜಮಾಡಿ, ಡಾ. ವೆಂಕಟ್ ರಾಯ ಪ್ರಭು, ಅಶ್ರಫ್ ಚೆಂಬುಗುಡ್ಡೆ, ಅಸ್ಗರ್ ಸಮ್ಮುಖದಲ್ಲಿ ಚಾಲಕ ಅವೀಶ್ ಮದರನ್ ಅವರನ್ನು ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *