ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹಗಳನ್ನು ಹೂತು ಹಾಕಿದ್ದಾನೆ ಎಂದು ಹೇಳಿರುವ ವ್ಯಕ್ತಿಯೊಬ್ಬ ಶುಕ್ರವಾರ ತಮ್ಮ ಇಬ್ಬರು ವಕೀಲರೊಂದಿಗೆ ಬೆಳ್ತಂಗಡಿಯ ನ್ಯಾಯಾಲಕ್ಕೆ ಹಾಜರಾಗಿದ್ದು ಆತನ ಮಾಹಿತಿಗಳು ಬಹಿರಂಗವಾಗಿದೆ.

ಈ ಕುರಿತು ಪತ್ರಿಕಾ ಪ್ರಕಣೆಯೊಂದನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ದಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ|. ಅರುಣ್ ಕೆಯವರು ಪ್ರಕರಣದ ಪ್ರಮುಖ ಸಾಕ್ಷಿಯಾಗಿರುವ ದೂರುದಾರರಿಗೆ ಜಿಲ್ಲಾ ಸಕ್ಷಮ ಪ್ರಾಧಿಕಾರವು ಸಾಕ್ಷಿ ಸಂರಕ್ಷಣೆ ಆದೇಶ ನೀಡಿದ್ದು , ಸಾಕ್ಷಿ ದೂರುದಾರರನ್ನು ಪ್ರತಿನಿಧಿಸಿದ್ದ ಕೆಲವು ವ್ಯಕ್ತಿಗಳು ಎಫ್.ಐ.ಆರ್ ಪ್ರತಿ ಹಾಗೂ ಪತ್ರಿಕಾ ಪ್ರಕಟಣೆಯನ್ನು ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಕಾರಣ, ದೂರುದಾರರ ವಯಸ್ಸು, ವೃತ್ತಿ, ಸಮುದಾಯ, ಚಹರೆ ಮುಂತಾದ ವೈಯಕ್ತಿಕ ವಿವರಗಳು ಬಹಿರಂಗಗೊಂಡಿವೆ. ಇದರಿಂದ ಸ್ಥಳೀಯವಾಗಿ ಸಾಕ್ಷಿಯ ಗುರುತನ್ನು ಹಲವರು ಅಂದಾಜಿಸುವಂತಾಗಿದೆ ಎಂದು ಪ್ರಕಟನೆಯಲ್ಲಿ ಉಲ್ಲೇಖಿಸಲಾಗಿದೆ.

ಈ ಗಂಭೀರ ಲೋಪವನ್ನು ಪರಿಗಣಿಸಿರುವ ಪೊಲೀಸ್ ಇಲಾಖೆಯು, ಅಧಿಕೃತ ಮೂಲಗಳಿಂದ ಸಾಕ್ಷಿಯ ಗುರುತನ್ನು ಯಾವುದೇ ಕಾರಣಕ್ಕೂ ಬಹಿರಂಗಪಡಿಸದಿರಲು ಕಟ್ಟುನಿಟ್ಟಿನ ನಿರ್ಧಾರ ಕೈಗೊಂಡಿದೆ.
ಅಲ್ಲದೆ, ಸಾಕ್ಷಿಯ ಗುರುತನ್ನು ಬಹಿರಂಗಪಡಿಸಿದವರ ವಿರುದ್ಧ ಬಂಟ್ವಾಳ ಪೊಲೀಸ್ ಉಪಾಧೀಕ್ಷಕರ ನೇತೃತ್ವದಲ್ಲಿ ಪ್ರತ್ಯೇಕ ತನಿಖೆ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.

ಇತ್ತ ದೂರುದಾರರ ಪರ ವಕೀಲರಾದ ಓಜಸ್ವಿ ಗೌಡ ಮತ್ತು ಸಚಿನ್ ದೇಶಪಾಂಡೆ ಅವರು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದು, ನಮ್ಮ ಕಕ್ಷಿದಾರರಾದ ದೂರುದಾರರು ಅನಕ್ಷರಸ್ಥರಾಗಿದ್ದು, ಈ ಹಿಂದೆಂದೂ ನ್ಯಾಯಾಲಯಕ್ಕೆ ಬಂದವರಲ್ಲ.
ಈ ಪ್ರಕ್ರಿಯೆಯ ಬಗ್ಗೆ ಅವರು ತೀವ್ರ ಆತಂಕ ಮತ್ತು ಕಷ್ಟವನ್ನು ವ್ಯಕ್ತಪಡಿಸಿದ್ದರು. ಹೀಗಾಗಿ, ಹೇಳಿಕೆ ನೀಡುವಾಗ ತಮ್ಮಲ್ಲಿ ಒಬ್ಬರು ಹಾಜರಿರಬೇಕೆಂದು ಅವರು ಸ್ಪಷ್ಟವಾಗಿ ಸೂಚಿಸಿದ್ದರು. ಈ ವಿಷಯವನ್ನು ನಾವು ನ್ಯಾಯಾಲಯದ ಗಮನಕ್ಕೆ ತಂದಿದ್ದೆವು ಎಂದು ತಿಳಿಸಿದ್ದಾರೆ.

ಆದಾಗ್ಯೂ, ನ್ಯಾಯಾಲಯವು ವಕೀಲರ ಉಪಸ್ಥಿತಿಗೆ ಸಮ್ಮತಿಸಲಿಲ್ಲ ಮತ್ತು ನಮ್ಮ ಅನುಪಸ್ಥಿತಿಯಲ್ಲೇ ದೂರುದಾರರ ಹೇಳಿಕೆಗಳನ್ನು ದಾಖಲಿಸುವ ಪ್ರಕ್ರಿಯೆಯನ್ನು ಆರಂಭಿಸಿತು ಎಂದು ವಕೀಲರು ತಮ್ಮ ಪ್ರಕಟಣೆಯಲ್ಲಿ ವಿವರಿಸಿದ್ದಾರೆ.
ಇತ್ತ ನ್ಯಾಯಾಲಯಕ್ಕೆ ದೂರುದಾರ ವ್ಯಕ್ತಿ ನೀಡಿದ ಹೇಳಿಕೆ ಮತ್ತು ಅಸ್ಥಿಪಂಜರದ ವರದಿಯು ತನಿಖೆಯ ದಿಕ್ಕನ್ನು ನಿರ್ಧರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ. ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳಲಿದ್ದಾರೆ ಎಂದು ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪ್ರಕಟನೆಯಲ್ಲಿ ಮಾಹಿತಿ ನೀಡಿದ್ದಾರೆ.


