ಸಿದ್ಧಕಟ್ಟೆ : ನಾಯಕತ್ವ ಬೆಳವಣಿಗೆಗೆ ಶ್ರಮದ ಜೊತೆ ನಿಷ್ಠೆ ಮತ್ತು ತಾಳ್ಮೆ ರೂಡಿಸಿಕೊಂಡಾಗ ಯಶಸ್ಸು ಸಾಧ್ಯ ಎಂದು ರೋಟರಿ ಜಿಲ್ಲಾ ಮಾಜಿ ಅಸಿಸ್ಟೆಂಟ್ ಗವರ್ನರ್ ರೋ ರಾಘವೇಂದ್ರ ಭಟ್ ಅಭಿಪ್ರಾಯ ಪಟ್ಟರು.
ಅವರು ಸರಕಾರಿ ಪದವಿ ಪೂರ್ವ ಕಾಲೇಜು ಸಿದ್ಧಕಟ್ಟೆ ಇಲ್ಲಿನ 2025- 26 ನೇ ಸಾಲಿನ ವಿದ್ಯಾರ್ಥಿ ಸಂಘದ ಹಾಗೂ ಇತರ ಸಂಘಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅವಕಾಶ ಗಳನ್ನು ಹುಡುಕಿಕೊಂಡು, ದೇಶದ ಇತಿಹಾಸದಲ್ಲಿ ಕಾಣುವ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಗೈದರವರ ಆದರ್ಶಗಳನ್ನು ಅಳವಡಿಸಿಕೊಂಡಾಗ ಸಮಾಜದಲ್ಲಿ ಉತ್ತಮ ನಾಯಕನಾಗಲೂ ಸಾಧ್ಯ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಪ್ರಭಾಕರ ಪ್ರಭು ಮಾತನಾಡಿ ವಿದ್ಯಾರ್ಥಿಗಳು ಗುರು ಹಿರಿಯರಿಗೆ ವಿಧೇಯರಾಗಿದ್ದುಕೊಂಡು ಮನೆಯಲ್ಲಿ ತಂದೆ ತಾಯಿ, ಪೋಷಕರನ್ನು ಆರೈಕೆ ಮಾಡಿಕೊಂಡು, ಮನೆಯಲ್ಲಿರುವವರನ್ನು ಮೊದಲು ಗೌರವಿಸಿಕೊಂಡು ಸಮಾಜವನ್ನು ಗೌರವಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾಲೇಜಿನ ಪ್ರಾಂಶುಪಾಲರಾದ ಉದಯಕುಮಾರ್ ಇವರು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರಮಾಣ ವಚನವನ್ನು ಬೋಧಿಸಿದರು.

ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ಶೀನಪ್ಪ ಎನ್ ಸ್ವಾಗತಿಸಿ, ವಿದ್ಯಾರ್ಥಿ ಸಂಘದ ನಾಯಕ ಪವನ್ ವಂದಿಸಿದರು. ಉಪನ್ಯಾಸಕರಾದ ಸಂಜಯ್ ಬಿ ಎಸ್ ಕಾರ್ಯಕ್ರಮವನ್ನು ನಿರೂಪಿಸಿದರು.


