ಬಂಟ್ವಾಳ: ಯೂತ್ ಫಾರ್ ಸೇವಾ ಎಂಬ ಸ್ವಯಂಸೇವಾ ಸಂಸ್ಥೆ ವತಿಯಿಂದ ಬೆಂಗಳೂರಿನ ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಪ್ರಾಯೋಜಿಸಿದ ಬ್ಯಾಗ್ ಮತ್ತು ಬರೆಯುವ ಪುಸ್ತಕಗಳನ್ನು ಬಿ.ಸಿ.ರೋಡಿನ ಅಜ್ಜಿಬೆಟ್ಟುವಿನಲ್ಲಿರುವ ಬಿ.ಮೂಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿತರಿಸಲಾಯಿತು.
ಬೆಂಗಳೂರಿನ ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಇಂಜಿನಿಯರುಗಳಾದ ರಿಯಾ ಸೈನಿ, ಪೂಜಿತಾ ಬಚು, ಭೂಮಿ ವವಾಡಿಯ, ಕುಂಜನ್ ಪಟೇಲ್, ಆಯುಷ್ ಗಾರ್ಗ್, ವಂಶ್ ಸಿಂಘಲ್ ಅವರು ಆಗಮಿಸಿ ಶಾಲೆಯ 107 ವಿದ್ಯಾರ್ಥಿಗಳಿಗೆ ಪುಸ್ತಕ, ಬ್ಯಾಗ್ ವಿತರಿಸಿ ಮಾತನಾಡಿ, ಎಳವೆಯಲ್ಲೇ ಚೆನ್ನಾಗಿ ವಿದ್ಯಾಭ್ಯಾಸ ಮಾಡಿದರೆ ಮುಂದೆ ಉತ್ತಮ ಸ್ಥಾನಮಾನಗಳನ್ನು ಹೊಂದಿ, ಭವಿಷ್ಯ ಭಾರತದ ಸತ್ಪ್ರಜೆಗಳಾಗಬಹುದು ಎಂದರು.
ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ವಿನೋದಾ ಅಧ್ಯಕ್ಷತೆ ವಹಿಸಿದ್ದರು. ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಜಯಂತಿ, ಅನಿತಾ, ಕವಿತಾ, ನಿಶ್ಮಿತಾ, ಶಮೀಮಾ, ಶಿವಮೂರ್ತಿ, ಅತಿಥಿ ಮತ್ತು ಗೌರವ ಶಿಕ್ಷಕರಾದ ನಿಶ್ಮಿತಾ, ಪೂರ್ಣಿಮಾ, ಲಾವಣ್ಯ ಮತ್ತು ದಿವ್ಯಾ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯಿನಿ ಲಕ್ಷ್ಮೀ ಕೆ. ಸ್ವಾಗತಿಸಿದರು.
ಶಾಲಾಭಿವೃದ್ಧಿ ಸಮಿತಿ ನಿಕಟಪೂರ್ವ ಅಧ್ಯಕ್ಷ ಹರೀಶ ಮಾಂಬಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಹಿರಿಯ ಸಹಶಿಕ್ಷಕಿ ಸುಶೀಲಾ ಕಾರ್ಯಕ್ರಮ ನಿರ್ವಹಿಸಿದರು. ಹಿರಿಯ ಸಹಶಿಕ್ಷಕಿ ತಾಹಿರಾ ವಂದಿಸಿದರು.