ಮಂಗಳೂರು: ಮದ್ಯಪಾನ ಮಾಡಿ ವಾಹನ ಚಲಾಯಿಸುವ ಪ್ರಕರಣಗಳು ಹೆಚ್ಚಾಗುತ್ತಿದ್ದು ಮಂಗಳೂರು ನಗರ ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ಸಾರ್ವಜನಿಕರಿಗೆ ಎಚ್ಚರಿಕೆಯ ಸಂದೇಶನ್ನು ನೀಡಿದ್ದಾರೆ.
ಮದ್ಯಪಾನ ಮಾಡಿ ವಾಹನ ಚಲಾಯಿಸಿದರೆ ರಸ್ತೆ ಅಪಘಾತ ಉಂಟಾಗಿ ಚಾಲಕ, ಪ್ರಯಾಣಿಕರು ಸಾವು ನೋವುಗಳನ್ನು ಅನುಭವಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಇದರಿಂದಾಗಿ ಕುಟುಂಬಗಳು ದು:ಖ ಅನುಭವಿಸುತ್ತಾರೆ.

ಮದ್ಯ ಸೇವನೆ ಮಾಡಿ ವಾಹನ ಚಲಾಯಿಸಿದಲ್ಲಿ ಭಾರತೀಯ ಮೋಟಾರು ವಾಹನ ಕಾಯ್ದೆ ಕಲಂ 185ರ ಅನ್ವಯ ಪ್ರಕರಣ ದಾಖಲಿಸಿ 10,000ರೂ. ವರೆಗೆ ದಂಡ ವಿಧಿಸಬೇಕಾಗುತ್ತದೆ. ಅತೀವೇಗದಿಂದ ವಾಹನ ಚಲಾಯಿಸಿದರೆ ಭಾರತೀಯ ಮೋಟಾರು ವಾಹನ ಕಾಯ್ದೆ ಕಲಂ 183ರ ಅನ್ವಯ ಪ್ರಕರಣ ದಾಖಲಿಸಿ 1,000 ರೂ. ಇತರ ವಾಹನಗಳಿಗೆ 2,000 ರೂ.ವರೆಗೆ ದಂಡ ವಿಧಿಸಲಾಗುವುದು ಎಂದು ತಿಳಿಸಿದ್ದಾರೆ.

ಈ ವರ್ಷದಲ್ಲಿ ನಡೆದ ರಸ್ತೆ ಅಪಘಾತದಲ್ಲಿ 75 ಮಂದಿ ಸಾವನ್ನಪ್ಪಿದ್ದಾರೆ. ದುಡುಕುತನ ಮತ್ತು ನಿರ್ಲಕ್ಷ್ಯವೇ ಮುಖ್ಯ ಕಾರಣವಾಗಿದ್ದು, ಮೃತಪಟ್ಟವರಲ್ಲಿ ಹೆಚ್ಚಿನವರು 25ರಿಂದ 30 ವರ್ಷ ವಯಸ್ಸಿನವರೇ ಎಂದು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಮಾಹಿತಿ ನೀಡಿದ್ದಾರೆ.
