ಮಂಗಳೂರು:ಸಂಘರ್ಷ ತಡೆದು ಶಾಂತಿ ಕಾಪಾಡುವುದು ವಿಶೇಷ ಕಾರ್ಯಪಡೆಯ ಉದ್ದೇಶ. ಜನ ಅರ್ಥ ಮಾಡಿಕೊಂಡರೆ ಈ ಪಡೆಯ ಅಗತ್ಯತೆ ಕಡಿಮೆಯಾಗುತ್ತದೆ. ಕಾರ್ಯಪಡೆಯನ್ನು ಸಾಂಕೇತಿಕವಾಗಿ ರಚಿಸಲಾಗಿದೆ ಎಂದು ಗೃಹ ಸಚಿವ ಡಾ ಜಿ.ಪರಮೇಶ್ವರ್ ಹೇಳಿದರು.
ವಿಶೇಷ ಕಾರ್ಯ ಪಡೆಯ ಉದ್ಘಾಟನೆ ಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಕ್ಸಲ್ ನಿಗ್ರಹ ಪಡೆ ವಿಸರ್ಜಿಸುವುದಿಲ್ಲ. ಅದರ ಪ್ರಮಾಣ ಕಡಿಮೆ ಮಾಡಿದ್ದೇವೆ. ಸದ್ಯಕ್ಕೆ ಅಗತ್ಯತೆ ಇಲ್ಲದಿದ್ದರೂ ಯಾವುದಾದರೂ ಸಂದರ್ಭದಲ್ಲಿ ಅಗತ್ಯ ಬಂದರೆ ಬೇಕಾಗುತ್ತದೆ ಎಂದು ಇಟ್ಟುಕೊಂಡಿದ್ದೇವೆ. ಒರಿಸ್ಸಾ, ಅಸ್ಸಾಂ ಮೊದಲಾದೆಡೆ ನಕ್ಸಲ್ ಚಟುವಟಿಕೆ ಇದೆ. ಅಲ್ಲಿಂದ ಇಲ್ಲಿಗೆ ಬರುವ ಸಾಧ್ಯತೆಯೂ ಇದೆ. ಅದು ಬಂದರೆ ತಯಾರಿರಬೇಕೆಂದು ನಕ್ಸಲ್ ನಿಗ್ರಹ ಪಡೆಯ ಸ್ವಲ್ಪ ಭಾಗವನ್ನು ಹಾಗೆಯೇ ಇಟ್ಟುಕೊಂಡಿದ್ದೇವೆ ಎಂದರು.
ಕರಾವಳಿಯಲ್ಲಿ ಎಲ್ಲೋ ಒಂದು ಕಡೆ ದ್ವೇಷ ಹೆಚ್ಚಾಗುತ್ತಿದೆ. ಇದನ್ನು ಆದಷ್ಟು ಶೀಘ್ರವಾಗಿ ಹತ್ತಿಕ್ಕದೆ ಇದ್ದರೆ ಇದು ಬೇರೆ ಬೇರೆ ಭಾಗಕ್ಕೂ ಹೋಗುವ ಸಾಧ್ಯತೆಯಿದೆ. ನಾನು ಈ ಹಿಂದೆಯೇ ಒಂದು ಟಾಸ್ಕ್ ಫೋರ್ಸ್ ಮಾಡಲು ಆಗಿನ ಕಮೀಷನರ್ ಗೆ ಹೇಳಿದ್ದೆ. ಅವತ್ತು ಸಣ್ಣದೊಂದು ಫೋರ್ಸ್ ಮಾಡಿದ್ದರೂ ಅಷ್ಟು ಪ್ರಯೋಜನಕಾರಿಯಾಗಿಲ್ಲ. ಮೊನ್ನೆ ನಡೆದಂತಹ ಮೂರು ಕೊಲೆಗಳನ್ನು ಗಮನಿಸಿದಾಗ ಒಂದು ವಿಶೇಷ ಪಡೆಯನ್ನೇ ಮಾಡಬೇಕು ಎಂದು ನನಗೆ ಅನ್ನಿಸಿತ್ತು. ಇದಕ್ಕೆ ಒಂದು ಕಠಿಣವಾದ ತೀರ್ಮಾನ ಆಗಬೇಕು, ಕಠಿಣವಾದ ಕ್ರಮ ಆಗಬೇಕು ಅಂದುಕೊಂಡೆ. ಇದಕ್ಕಾಗಿಯೇ ನಾನು ಅವತ್ತೇ ಘೋಷಣೆ ಮಾಡಿ ಹೋದೆ. ಒಂದು ವಾರದಲ್ಲೇ ಅದಕ್ಕೊಂದು ರೂಪುರೇಷೆ ಮಾಡಿದ್ದೇವೆ ಎಂದರು.
ಇದು ಕೋಮು ದ್ವೇಷ ನಿಗ್ರಹಕ್ಕೆ ಸ್ಥಾಪನೆಯಾದ ಭಾರತದ ಮೊದಲ ಕಾರ್ಯಪಡೆ. ದೇಶದ ಯಾವ ರಾಜ್ಯದಲ್ಲೂ ಕೋಮುಸಂಘರ್ಷವನ್ನು ಕಂಟ್ರೋಲ್ ಮಾಡಲು ಪ್ರತ್ಯೇಕ ಪೋರ್ಸ್ ಇಲ್ಲ. ಕೋಮುದ್ವೇಷವನ್ನು ಹರಡಿಸುವ ಜನ ಹಾಗೂ ಸಮುದಾಯವನ್ನು ಹತ್ತಿಕ್ಕುವ ಕೆಲಸ ಈ ಫೋರ್ಸ್ ಮಾಡಲಿದೆ. ಈ ಫೋರ್ಸ್ ಗೆ ಬೇರೆ ಯಾವುದೇ ಕೆಲಸ ಇಲ್ಲ. ಶಾಂತಿ ನೆಲೆಸಬೇಕು ಎನ್ನುವ ಒಂದೇ ಕಾರಣದಿಂದ ಮಾಡಲಾಗಿದೆ. ಈ ಕಾರ್ಯಪಡೆ ಯಶಸ್ವಿಯಾಗುತ್ತದೆ ಎನ್ನುವುದು ನಮ್ಮ ನಂಬಿಕೆ ಎಂದರು.
ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಜಿಲ್ಲೆಯಲ್ಲಿ ಸ್ವಲ್ಪ ಹೆಚ್ಚಿನ ರೀತಿಯಲ್ಲಿ ಚಟುವಟಿಕೆಗಳು ಆಗುತ್ತಿದೆ. ಬೇರೆ ಜಿಲ್ಲೆಯ ವಾತಾವರಣ ಬೇರೆ ಇದೆ, ಅಲ್ಲಿಗೆ ಈ ಕಾರ್ಯಪಡೆ ಅಗತ್ಯ ಬೀಳುವುದಿಲ್ಲ. ಮುಂದೆ ಈ ಜಿಲ್ಲೆಗೂ ಅಗತ್ಯ ಬೀಳದಂತೆ ಆಗಲಿ ಎಂದು ಹಾರೈಸುತ್ತೇನೆ ಎಂದರು.



