ಮಂಗಳೂರು: ಯಾರಿಗೂ ಕೊಲೆ ಅಥವಾ ಹಲ್ಲೆ ಮಾಡುವ ಅಧಿಕಾರ ಇಲ್ಲ. ಇಂತಹ ಕೃತ್ಯಗಳನ್ನು ಎಲ್ಲರೂ ಖಂಡಿಸಬೇಕು. ಅಧಿಕಾರಿಗಳು ಏಕರೂಪದ ಕಾನೂನು ಜಾರಿಗೊಳಿಸಬೇಕು. ಸರ್ಕಾರವು ಈ ಕುರಿತು ಅಧಿಕಾರಿಗಳಿಗೆ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ರೂಪಿಸಬೇಕು ಎಂದು ಖಾದರ್ ಒತ್ತಾಯಿಸಿದ್ದಾರೆ.
ಮಂಗಳೂರಿನ ನಗರದ ಸರ್ಕ್ಯುಟ್ ಹೌಸ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಎಲ್ಲ ಐಪಿಎಸ್ ಅಧಿಕಾರಿಗಳ ಶೈಕ್ಷಣಿಕ ಡಿಗ್ರಿ ಒಂದೇ ಆಗಿದ್ದರೂ, ದಕ್ಷಿಣ ಕನ್ನಡ ಜಿಲ್ಲೆಗೆ ಬರುವ ಅಧಿಕಾರಿಗಳು ಕೋಮು ದ್ವೇಷ, ಪ್ರಚೋದನಕಾರಿ ಭಾಷಣ, ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷ ಫೋಸ್ಟ್ಗಳ ವಿರುದ್ಧ ವಿಭಿನ್ನ ರೀತಿಯ ಆಡಳಿತ ನಡೆಸುತ್ತಾರೆ. ಈ ಕಾರಣದಿಂದಾಗಿ ಹಿಂದಿನ ಅಧಿಕಾರಿಗಳ ವಿರುದ್ಧ ತನಿಖೆ ಅಗತ್ಯ ಎಂದರು.

ಜಿಲ್ಲೆಯಲ್ಲಿ ಇತ್ತೀಚಿಗೆ ನಡೆದ ಘಟನೆಗಳು ಜಿಲ್ಲೆಯ ಸೌಹಾರ್ದಕ್ಕೆ ಕಪ್ಪು ಚುಕ್ಕೆಯಾಗಿವೆ. ಭಿನ್ನಾಭಿಪ್ರಾಯಗಳಿರಬಹುದು, ಆದರೆ ಅವುಗಳನ್ನು ಮಾತುಕತೆಯಿಂದ ಬಗೆಹರಿಸಬೇಕು. ಇದು ಕೇವಲ ಜನಪ್ರತಿನಿಧಿಗಳ ಜವಾಬ್ದಾರಿಯಲ್ಲ, ಪ್ರತಿಯೊಬ್ಬ ನಾಗರಿಕ, ಸಂಘ-ಸ೦ಸ್ಥೆಗಳ ಜವಾಬ್ದಾರಿಯೂ ಹೌದು.
ಜನಪ್ರತಿನಿಧಿಗಳ ಮಾತು ಸಮಾಜವನ್ನು ಒಡೆಯುವಂತಿರದೆ, ಒಗ್ಗೂಡಿಸುವಂತಿರಬೇಕು. ಯಾವ ಧರ್ಮವೂ ಮನುಷ್ಯನ ಮನಸ್ಸು ಅಥವ ದೇಹಕ್ಕೆ ಗಾಯವಾಗುವ ಕತ್ತಿಯಾಗಬಾರದು; ಅದು ಮನಸ್ಸಿಗೆ ಮತ್ತು ದೇಹಕ್ಕೆ ಒಳಿತನ್ನು ನೀಡಬೇಕು. ಈ ನಿಟ್ಟಿನಲ್ಲಿ ಪೊಲೀಸರ ಪಾತ್ರವು ಮುಖ್ಯವಾಗಿದೆ. ಜಿಲ್ಲೆಯ ಶಾಂತಿ ಮತ್ತು ಸೌಹಾರ್ದಕ್ಕಾಗಿ ನಿಷ್ಪಕ್ಷ ಕ್ರಮಗಳು ಅಗತ್ಯ ಎಂದರು.

ಸುಹಾಸ್ ಶೆಟ್ಟಿ ಹತ್ಯೆ ಎನ್‌ಐಎ ಗೆ ಹಸ್ತಾಂತರ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ, ಹತ್ಯೆ ಆದವರ ಕುಟುಂಬಸ್ಥರು ಸರ್ಕಾರಕ್ಕೆ ಮನವಿ ಮಾಡಲಿ. ಹತ್ಯೆಯ ತನಿಖೆ ಎನ್‌ಐಎಗೆ ನೀಡಲಿ ಎಂದು ಮನವಿ ಮಾಡಲಿ. ಸರ್ಕಾರ ಈ ಬಗ್ಗೆ ಚರ್ಚೆ ನಡೆಸುತ್ತದೆ ಎಂದರು.


