ಅಹಮದಾಬಾದ್: 242 ಮಂದಿಯನ್ನು ಹೊತ್ತು ಸಾಗುತ್ತಿದ್ದ ಏರ್ ಇಂಡಿಯಾ ವಿಮಾನ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಅಹಮದಾಬಾದ್ನ ಮೇಘನಿ ನಗರದಲ್ಲಿರುವ ಬಿಜೆ ವೈದ್ಯಕೀಯ ಹಾಸ್ಟೆಲ್ ಕಟ್ಟಡ ಮೇಲೆ ಪತನಗೊಂಡಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಅಧಿಕಾರಿಗಳು ಮಾಹಿತಿ ನೀಡಿದ್ದು ಕಾಲೇಜಿನ ಹಾಸ್ಟೆಲ್ ಕಟ್ಟಡ ಮೇಲೆ ಏರ್ ಇಂಡಿಯಾ ವಿಮಾನ ಪತನಗೊಂಡಿದ್ದು ಈ ವೇಳೆ ಹಾಸ್ಟೆಲ್ ನಲ್ಲಿ ಇಪ್ಪತ್ತಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ಇಲ್ಲಿನ ಮೆಸ್ ನಲ್ಲಿ ಮಧ್ಯಾಹ್ನದ ಊಟ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಘಟನೆಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಗಂಭೀರ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಹೇಳಿದ್ದಾರೆ.

ಇಂದು ಮಧ್ಯಾಹ್ನ 1:10 ರ ಸುಮಾರಿಗೆ ಅಹಮದಾಬಾದ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಿ ಲಂಡನ್ಗೆ ತೆರಳುತ್ತಿದ್ದ ಏರ್ ಇಂಡಿಯಾ ಬೋಯಿಂಗ್ 787-8 ಡ್ರೀಮ್ಲೈನರ್ ವಿಮಾನ ಟೇಕ್ ಆಫ್ ಆದ ಕೆಲವೇ ಹೊತ್ತಿನಲ್ಲಿ ಅಹಮದಾಬಾದ್ನ ಮೇಘನಿ ನಗರದಲ್ಲಿರುವ ಹಾಸ್ಟೆಲ್ ಕಟ್ಟಡದ ಮೇಲೆ ಪತನಗೊಂಡಿದೆ.

ಇನ್ನು ಈ ವಿಮಾನದಲ್ಲಿ 169 ಭಾರತೀಯರು, 53 ಬ್ರಿಟಿಷ್, 7 ಪೋರ್ಚುಗೀಸ್ ಮತ್ತು 1 ಕೆನಡಾದ ಪ್ರಜೆಗಳು ಇದ್ದರು. ಬೋಯಿಂಗ್ 787-8 ಡ್ರೀಮ್ಲೈನರ್ ವಿಮಾನದಲ್ಲಿ ಒಟ್ಟು 230 ಪ್ರಯಾಣಿಕರು ಮತ್ತು 12 ಸಿಬ್ಬಂದಿ ಸೇರಿ 242 ಜನರಿದ್ದರು ಎಂದು ಏರ್ ಇಂಡಿಯಾ ತಿಳಿಸಿದೆ.



