ಬೆಳ್ತಂಗಡಿ: ತಾಲೂಕಿನ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ, ಯುವ ಬಿಲ್ಲವ ಮತ್ತು ಮಹಿಳಾ ಬಿಲ್ಲವ ವೇದಿಕೆ ನೇತೃತ್ವದಲ್ಲಿ, ಸಂಘದ ಧತ್ತಿನಿಧಿ ಯೋಜನೆಯಡಿ ನೀಡಲ್ಪಡುವ ಉಚಿತ ಪುಸ್ತಕ ವಿತರಣಾ ಸಮಾರಂಭ ಜೂ.8 ರಂದು ನಡೆಯಿತು.
ನಿವೃತ್ತ ಮುಖ್ಯೋಪಾಧ್ಯಾಯಿನಿ ಪುಷ್ಪಲತಾ ಅವರು ಕಾರ್ಯಕ್ರಮ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ವಿದ್ಯೆಯೆಂಬ ಶಕ್ತಿ ನಮ್ಮೊಳಗಿದ್ದಾಗ ಆತ್ಮವಿಶ್ವಾಸ ಹೆಚ್ಚಾಗಿ ಸರಿಯಾದ ಗುರಿ ತಲುಪಲು ಸಾಧ್ಯವಿದೆ. ಜನರಲ್ಲಿ ಜಾಗೃತಿ ಮೂಡಿ, ಸ್ವಾವಲಂಬನೆಗೆ ಹೆಚ್ಚಿನ ಒತ್ತು ನೀಡಿದಾಗ ಸಮಾಜದ ಬದಲಾವಣೆ ಸಾಧ್ಯ.


ಶಿಕ್ಷಣದ ಮೂಲಕ ಕೇರಳದಲ್ಲಿ ಕ್ರಾಂತಿ ಮಾಡಿ ಸಾಕ್ಷರತೆಯ ನಾಡನ್ನಾಗಿ ಪರಿವರ್ತಿಸಿದವರು ಬ್ರಹ್ಮಶ್ರೀ ನಾರಾಯಣ ಗುರುಗಳು. ಅವರ ಅದ್ಬುತ ಚಿಂತನೆ, ದೂರದೃಷ್ಟಿ ಸಾರ್ವಕಾಲಿಕವಾದುದು. ಅವರ ತತ್ವ ಸಿದ್ದಾಂತಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಬದುಕು ಉನ್ನತಿ ಪಡೆಯುತ್ತದೆ ಎಂದರು.

ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ಅಧ್ಯಕ್ಷತೆ ವಹಿಸಿ ಮಾತನಾಡಿ ಶಿಕ್ಷಣದಿಂದ ಮಾತ್ರ ಸಮಾಜದ ಪರಿವರ್ತನೆ ಸಾಧ್ಯವಾಗಿದ್ದು ಕಳೆದೆರೆಡು ದಶಕಗಳಿಂದ ಸಂಘವು ಧತ್ತಿನಿಧಿ ಯೋಜನೆಯಿಂದ ಕಲಿಕೆಗೆ ಹೆಚ್ವಿನ ಪ್ರೋತ್ಸಾಹ ನೀಡುತ್ತಿದೆ ಎಂದರು.

ವೇದಿಕೆಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಉಪಾಧ್ಯಕ್ಷ ಕೃಷ್ಣಪ್ಪ ಪೂಜಾರಿ ಬೊಂಟ್ರೋಟ್ಟು, ಕೋಶಾಧಿಕಾರಿ ಪ್ರವೀಣ್ ಕುಮಾರ್ ಹೆಚ್.ಎಸ್, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಶರತ್ ಅಂಚನ್, ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷೆ ಭಾರತಿ ಸಂತೋಷ್ ಕುಮಾರ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿ, ಪ್ರವೀಣ್ ಕುಮಾರ್ ಹೆಚ್ ಎಸ್ ಸ್ವಾಗತಿಸಿ, ಶಿಕ್ಷಕಿ ವಿಶಾಲ ಜಗದೀಶ್ ನಿರೂಪಿಸಿ, ವಂದಿದಿದರು. ಸಂಘದ ಮಾಜಿ ಅಧ್ಯಕ್ಷರು, ನಿರ್ದೇಶಕರು ಸದಸ್ಯರು ಸಹಕರಿಸಿದರು.
