Breaking
3 Jul 2025, Thu

ಪುತ್ತೂರಿನ ಫಿಲೋಮಿನಾ ಪ.ಪೂ ಕಾಲೇಜಿನಲ್ಲಿ ಮಾದಕ ಮುಕ್ತ ಅಭಿಯಾನ ಮಾಹಿತಿ ಕಾರ್ಯಕ್ರಮ

ಪುತ್ತೂರು: ಭಾರತ ಸರಕಾರದ ಸಾಮಾಜಿಕ ನ್ಯಾಯ ಮತ್ತು ಉದ್ಯೋಗ ಸಚಿವಾಲಯದ ಆಯೋಜನೆಯಲ್ಲಿ “ನಶ್ ಮುಕ್ತ ಭಾರತ್ ಅಭಿಯಾನ್” ವನ್ನು ಪುತ್ತೂರಿನ ಪತ್ರಾವೋ ಆಸ್ಪತ್ರೆಯ ತಂಡವು ನಡೆಸುತ್ತಿದ್ದು, ಪುತ್ತೂರಿನ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಗಾರವನ್ನು ನಡೆಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಉಪ್ಪಿನಂಗಡಿ ಪವರ್ ಪ್ರಾಜೆಕ್ಟ್ ಸೈಟ್ ಇಲ್ಲಿನ ಸಿವಿಲ್ ಇಂಜಿನಿಯರ್ ಗಣೇಶ್ ರಾಜ್ ಮಾತನಾಡಿ ಮಾದಕ ವಸ್ತುಗಳ ಬಳಕೆ ಸಾಮಾನ್ಯವಾಗಿ ಪ್ರಪಂಚಾದ್ಯಂತ ಕಂಡು ಬರುವ ಒಂದು ದೊಡ್ಡ ಪಿಡುಗು. ಇತ್ತೀಚಿನ ದಿನಗಳಲ್ಲಿ ಮಾದಕ ದ್ರವ್ಯಗಳ ಚಟಕ್ಕೆ ವಿದ್ಯಾರ್ಥಿಗಳು ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ಗೆಳೆಯರೊಂದಿಗೆ ಮೋಜಿಗಾಗಿ ಅಂಟಿಕೊಂಡ ಚಟ ಇಡೀ ಜೀವನವನ್ನೇ ಹಾಳು ಮಾಡುತ್ತದೆ. ಮಾದಕ ವಸ್ತುಗಳ ಸೇವನೆಗೆ ಒಳಗಾದರೆ ಅದರಿಂದ ಹೊರಬರುವುದು ಕಷ್ಟಕರ ಎಂದು ಇವುಗಳ ದುಷ್ಪರಿಣಾಮದ ಬಗ್ಗೆ ಮಾಹಿತಿ ನೀಡಿದರು.

ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ. ಅಶೋಕ್ ರಾಯನ್ ಕ್ರಾಸ್ತಾ ಮಾತನಾಡಿ ಇಂದಿನ ದಿನಗಳಲ್ಲಿ ಯುವ ಜನಾಂಗ ಹೆಚ್ಚು ಮಾದಕ ವ್ಯಸನಕ್ಕೆ ಒಳಗಾಗುತ್ತಿದೆ. ಇದು ಸಮಾಜ ಮತ್ತು ಕುಟುಂಬದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಈ ಉದ್ದೇಶದಿಂದ ಮಕ್ಕಳು ಮಾದಕ ವಸ್ತುಗಳಿಂದ ದೂರವಿದ್ದು, ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಬಗ್ಗೆ ಅರಿವು ಮೂಡಿಸುವ ಅನಿವಾರ್ಯತೆ ಇದೆ ಎಂದು ಹೇಳಿದರು.

ಪತ್ರಾವೋ ಆಸ್ಪತ್ರೆಯ ಸಿಬ್ಬಂದಿ ಜೋನ್ಸನ್ ಪ್ರಾಸ್ತಾವಿಕ ಮಾತನಾಡಿ, ಮಾದಕ ವಸ್ತುಗಳಿಂದ ಇಂದು ಯುವ ಜನತೆ ಯಾವ ರೀತಿ ದಾರಿ ತಪ್ಪುತ್ತಿದೆ ಎಂಬುದರ ಬಗ್ಗೆ ತಿಳಿಸಿದರು. ನಶಾ ಮುಕ್ತ ಭಾರತ ಅಭಿಯಾನದ ಕುರಿತು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

ವೇದಿಕೆಯಲ್ಲಿ ಪುತ್ತೂರಿನ ಫಾ. ಪತ್ರಾವೋ ಆಸ್ಪತ್ರೆಯ ಸಿಐಪಿ ಯೋಜನೆಯ ನಿರ್ದೇಶಕರಾದ ಸಿಸ್ಟರ್ ಜಾನೆಟ್ ಕುಟಿನ್ಹ, ಕಾಲೇಜಿನ ಮಾನವಿಕ ಸಂಘದ ನಿರ್ದೇಶಕರಾದ ಗೀತಾ ಕುಮಾರಿ, ಸಂದೇಶ್ ಜಾನ್ ಲೋಬೋ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ವರ್ಗದವರು ಹಾಗೂ ಪುತ್ತೂರಿನ ಫಾ. ಪತ್ರಾವೋ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥಿಸಿ, ವಿದ್ಯಾರ್ಥಿಗಳಾದ ಅಶ್ವಿನ್ ಜಾರ್ಜ್ ಸ್ವಾಗತಿಸಿ, ಜೇಶ್ವಿನ್ ಎ. ಜೆ ಕಾರ್ಯಕ್ರಮ ನಿರೂಪಿಸಿ, ಹೇಮಶ್ರೀ ವಂದಿಸಿದರು.

Leave a Reply

Your email address will not be published. Required fields are marked *