ಮಂಗಳೂರು: ಹೆರಿಗೆ ನಂತರದಲ್ಲಿ ತೀವ್ರ ರಕ್ತಸ್ರಾವವಾಗಿ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಜೂನ್.4 ರಂದು ನಡೆದಿದೆ.
ಮೃತ ಮಹಿಳೆಯನ್ನು ಬೆಳ್ತಂಗಡಿ ತಾಲೂಕಿನ ನಾರಾವಿಯ ನೂಜೋಡಿ ಮಾಪಾಲ ಮನೆಯ ನಿವಾಸಿ ಶೇಖರ ಮಲೆಕುಡಿಯರ ಪತ್ನಿ ಮಧುರಾ (29) ಎಂದು ಗುರುತಿಸಲಾಗಿದೆ. ಸುಳ್ಯ ತಾಲೂಕು ಸಂಪಾಜೆ ಗ್ರಾಮದ ಕೊಯನಾಡು ಬಾಬು ಮಲೆಕುಡಿಯ ಮತ್ತು ಚಿನ್ನಮ್ಮ ದಂಪತಿ ಪುತ್ರಿಯಾದ ಮಧುರಾ ಅವರಿಗೆ ಆರು ವರ್ಷಗಳ ಹಿಂದೆ ನಾರಾವಿ ಗ್ರಾಮದ ನೂಜೋಡಿಯ ನಿವಾಸಿ ಶೇಖರ ಮಲೆಕುಡಿಯ ಅವರೊಂದಿಗೆ ವಿವಾಹವಾಗಿತ್ತು.

ಮಧುರಾರಿಗೆ ಅವರಿಗೆ ಮೂರುವರೆ ವರ್ಷದ ಗಂಡು ಮಗುವಿದ್ದು, ಎರಡನೆ ಮಗುವಿನ ಹೆರಿಗೆಗಾಗಿ ಜೂ.2ರಂದು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಜೂ.3ರಂದು ಸಂಜೆ 6.45ಕ್ಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಅವರಿಗೆ ರಾತ್ರಿ 9 ಗಂಟೆಗೆ ತೀವ್ರ ರಕ್ತಸ್ರಾವ ಉಂಟಾಗಿತ್ತು ಎಂದು ತಿಳಿದು ಬಂದಿದೆ.

ಈ ವೇಳೆ ತಕ್ಷಣ ಎಚ್ಚೆತ್ತ ವೈದ್ಯರು ಮಧುರಾ ಅವರನ್ನು ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಗೆ ರಾತ್ರಿ 11.30ಕ್ಕೆ ಕರೆತಂದು ದಾಖಲಿಸಿಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 12.37ಕ್ಕೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಅನ್ನುವ ಮಾಹಿತಿ ಇದೆ.
ಇತ್ತ ಮಂಗಳೂರು ಆಸ್ಪತ್ರೆಯಲ್ಲಿ ಮಧುರಾ ಅವರು ಮೃತಪಟ್ಟ ನಂತರ ಶವದ ಮರಣೋತ್ತರ ಪರೀಕ್ಷೆ ನಡೆಸದೆ ಹಾಗೆಯೇ ಬಿಟ್ಟು ಕೊಡಲಾಗಿತ್ತು. ಈ ವಿಚಾರವನ್ನು ರಾಜ್ಯ ಮಲೆಕುಡಿಯ ಸಂಘದ ಅಧ್ಯಕ್ಷ ಶ್ರೀಧರ ಗೌಡ ಈದು ಮತ್ತಿತ್ತರ ನಾಯಕರು ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ಇನ್ನೊಂದು ಕಡೆ ಮೃತ ಮಧುರಾ ಅವರ ಕುಟುಂಬಸ್ಥರು ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದು ಶವದ ಮರಣೋತ್ತರ ಪರೀಕ್ಷೆ ನಡೆಸದೆ ಮೃತ ದೇಹವನ್ನು ತುರ್ತಾಗಿ ಬಿಡುಗಡೆ ಮಾಡಲಾಗಿದ್ದು, ಸಾವಿಗೆ ವೈದ್ಯಾಧಿಕಾರಿಗಳ ನಿರ್ಲಕ್ಷವೇ ಕಾರಣ ಎಂದು ಆರೋಪಿಸಿದ್ದಾರೆ. ಶವದ ಮರಣೋತ್ತರ ಪರೀಕ್ಷೆ ನಡೆಸಿ, ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು, ಮಗುವಿನ ಭವಿಷ್ಯಕ್ಕಾಗಿ ಸರಕಾರದಿಂದ ಸೂಕ್ತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಮಾಹಿತಿಯಿಂದ ತಕ್ಷಣ ಎಚ್ಚೆತ್ತ ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳು ನಾರಾವಿಯ ಮನೆಗೆ ಬಂದು ಪರಿಶೀಲನೆ ನಡೆಸಿ ಮನೆಯವರ ಜೊತೆ ಮಾತುಕತೆ ನಡೆಸಿ ಬಳಿಕ ಮೃತದೇಹವನ್ನು ಪುನಃ ಮಂಗಳೂರಿನ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ತೆಗೆದುಕೊಂಡು ಬರಲಾಯಿತು.
ಬಳಿಕ ಮರಣೋತ್ತರ ಪರೀಕ್ಷೆಯನ್ನು ನಡೆಸಿ, ನಾರಾವಿಯ ಪತಿ ಶೇಖರ ಮಲೆಕುಡಿಯರ ಮನೆಯ ಬಳಿ ಅಂತ್ಯಸಂಸ್ಕಾರವನ್ನು ಮಾಡಲಾಯಿತು.


