ಪುತ್ತೂರು: ಪುತ್ತೂರಿನಲ್ಲಿ ಸಂಭವಿಸಿದ ಭೀಕರ ಮೇಘಾ ಸ್ಫೋಟಕ್ಕೆ ಜನತೆ ಬೆಚ್ಚಿಬಿದ್ದಿದ್ದು, ಬರೋಬ್ಬರಿ 5 ದಿನಗಳ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ.

ತಾಲೂಕಿನ ಬೆಳ್ಳಿಪ್ಪಾಡಿ ಮತ್ತು ಕೋಡಿಂಬಾಡಿಯಲ್ಲಿ ಮಡಿಕೇರಿ ಮಾದರಿಯಲ್ಲಿ ಅಲ್ಲಲ್ಲಿ ಭೂಕುಸಿತ ಉಂಟಾಗಿದ್ದು, ಏಕಕಾಲದಲ್ಲಿ ಸಂಭವಿಸಿದ ಮೇಘಾ ಸ್ಫೋಟಕ್ಕೆ ಎರಡು ಗ್ರಾಮಗಳಲ್ಲಿ ಹಲವರು ಮನೆಗಳನ್ನು ಕಳೆದುಕೊಂಡಿದ್ದಾರೆ.

ಮಾತ್ರವಲ್ಲ ಹಲವಾರು ಮನೆಗಳು ಕುಸಿಯುವ ಭೀತಿ ಇದ್ದು, ಸುಮಾರು 40 ಮನೆ ಅತಂತ್ರ ಪರಿಸ್ಥಿತಿಯನ್ನು ಎದುರಿಸುತ್ತಿವೆ. ಇತ್ತ ಗೃಹಪ್ರವೇಶವಾಗಿ ಕೆಲವೇ ತಿಂಗಳಲ್ಲಿ ಕುಟುಂಬವೊಂದು ಮನೆಯನ್ನು ಕಳೆದುಕೊಂಡಿದೆ. ಮಣ್ಣಿನ ರಭಸ ಬೆಟ್ಟದಿಂದ ಜಾರಿ ಬಂದಾಗ ಶಬ್ದ ಕೇಳಿ ಮನೆಯವರೆಲ್ಲ ಓಡಿ ಹೋಗಿ ಬಚಾವ್ ಆಗಿದ್ದು, ಹೊಸ ಮನೆ ಛಿದ್ರ ಛಿದ್ರವಾಗಿದೆ.
ಒಂದು ವೇಳೆ ಆ ಸಂದರ್ಭ ಮನೆಯ ಸದಸ್ಯರು ರಾತ್ರಿ ನಿದ್ದೆಗೆ ಜಾರಿದಲ್ಲಿ ಅವರೆಲ್ಲ ಬದುಕುಳಿಯುವ ಸಾಧ್ಯತೆಯೇ ಕಡಿಮೆ ಇತ್ತು ಎಂದು ಪ್ರತ್ಯಕ್ಷದರ್ಶಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.ಪುತ್ತೂರಿನಲ್ಲೇ ಎನ್ ಡಿ ಆರ್ ಎಫ್ ತಂಡವಿದ್ರೂ ಅಧಿಕಾರಿಗಳು ಅವರಿಗೆ ಮಾಹಿತಿ ನೀಡಿಲ್ಲ ಅಂತ ಹೇಳಲಾಗುತ್ತಿದೆ.

ಸೋಮವಾರ ಪುತ್ತೂರಿನಲ್ಲಿ ತಾಲೂಕು ಮಟ್ಟದ ಪ್ರಾಕೃತಿಕ ವಿಕೋಪ ನಿರ್ವಹಣಾ ಸಭೆಯಾಗಿದ್ದು ಆ ಸಭೆಯಲ್ಲಿ ಮೇಘಾ ಸ್ಫೋಟದ ವಿಚಾರಗಳು ಪ್ರಸ್ತಾಪವಾಗಿಲ್ಲ. ಪುತ್ತೂರು ಅಶೋಕ್ ಕುಮಾರ್ ರೈಯವರ ಕೋಡಿಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲೇ ಈ ಘಟನೆ ನಡೆದ್ರೂ ಘಟನೆಯನ್ನ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಜನತೆ ಆಕ್ರೋಶ ಹೊರಹಾಕಿದ್ದಾರೆ.
ಸದ್ಯ ನಿಗೂಢ ಪ್ರಶ್ನೆಯಾಗಿ ಉಳಿದ ಪುತ್ತೂರಿನ ಪ್ರಾಕೃತಿಕ ವಿಕೋಪವನ್ನು ರಾಷ್ಟ್ರೀಯ ವಿಪತ್ತು ಎಂಬುದಾಗಿ ಘೋಷಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದು, ಇದರ ಬಗ್ಗೆ ವೈಜ್ಞಾನಿಕ ತನಿಖೆಗೆ ಪಟ್ಟು ಹಿಡಿದಿದ್ದಾರೆ.
.


