ಬೆಂಗಳೂರು : ದ್ವೇಷ ಭಾಷಣ ನಿಯಂತ್ರಣ ನೆಪದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಸೇರಿದಂತೆ ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡವರ ಮೇಲೆ ಅನಗತ್ಯವಾಗಿ ಪ್ರಕರಣ ದಾಖಲಿಸಿ ಕಿರುಕುಳ ನೀಡಲಾಗುತ್ತಿದೆ ಎಂದು ಮಾಜಿ ಸಚಿವ ವಿ.ಸುನೀಲ್ ಕುಮಾರ್ ಸರ್ಕಾರದ ವಿರುದ್ಧ ಆರೋಪಿಸಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಅವರು ಖುದ್ದು ರಾಜ್ಯ ಸರ್ಕಾರವೇ ” ದ್ವೇಷ ಭಾಷೆ” ಯ ಪ್ರಚಾರ ನಡೆಸುತ್ತಿದ್ದು, ನಿರ್ದಾಕ್ಷಿಣ್ಯ ಕ್ರಮವನ್ನು ಹಿಂದೂ ಸಂಘಟನೆಗೆ ಸೀಮಿತಗೊಳಿಸುತ್ತಿದೆ. ಸರ್ಕಾರದ ಇಂತಹ ಏಕಪಕ್ಷೀಯ ಕ್ರಮ ಒಪ್ಪಲು ಸಾಧ್ಯವಿಲ್ಲ.
ಪ್ರಶಾಂತವಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದ್ವೇಷ ಹಾಗೂ ಹಿಂಸೆಗೆ ಪ್ರೇರಣೆ ನೀಡಿದವರು ಯಾರು ? ತಲವಾರು, ಕತ್ತಿ ಝಳಪಿಸಿ ಹತ್ಯೆಯ ಮಾತುಗಳನ್ನು ಆಡಿದವರನ್ನು ಪೊಲೀಸರು ಏಕೆ ಮುಟ್ಟುತ್ತಿಲ್ಲ ? ಪೊಲೀಸ್ ದೌರ್ಜನ್ಯದ ವಿರುದ್ಧ ಪ್ರತಿಭಟನೆ ನಡೆಸಿದವರಿಗೆ, ಸೋಷಿಯಲ್ ಮೀಡಿಯಾದಲ್ಲಿ ಸಂದೇಶ ರವಾನಿಸಿದವರ ಮೇಲೆ ಮಾತ್ರ ನಿಮ್ಮ ಕಾನೂನು ಕ್ರಮವೇ ?.

ಪೊಲೀಸರ ಈ ಕ್ರಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತಷ್ಟು ಪ್ರಕ್ಷುಬ್ಧತೆ ಮೂಡಿಸುವುದಕ್ಕೆ ಕಾರಣವಾಗುತ್ತದೆ. ಎಫ್ ಐಆರ್ ಅಸ್ತ್ರ ಬಳಸಿ ಶಾಂತಿ ಸ್ಥಾಪನೆಯ ಭ್ರಮ ಬೇಡ ವಾಗ್ದಾಳಿ ನಡೆಸಿದ್ದಾರೆ.


