ಪುತ್ತೂರು: ಹಿಂದೂ ಸಂಘಟನೆಯ ಕಾರ್ಯಕರ್ತರ ಮನೆಗೆ ನುಗ್ಗಿ ಜಿಪಿಎಸ್ ಪೋಟೋ ತೆಗೆಯುವ ಮೂಲಕ ಮಲಗಿರುವ ಮನೆ ಮಂದಿಗೂ ಹಿಂಸೆ ನೀಡಿವಂತ ಪ್ರಕ್ರಿಯೆ ಕಾಂಗ್ರೆಸ್ ಸರ್ಕಾರ ನಡೆಯುತ್ತಿದೆ ಎಂದು ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಸರಕಾರ ಮತ್ತು ಪೊಲೀಸ್ ಇಲಾಖೆ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಕಡಬ ಪೊಲೀಸ್ ಠಾಣೆಯಲ್ಲಿ 15 ಮಂದಿ ಹಿಂದೂ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಪುತ್ತೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು ಎಲ್ಲಾ ಘಟನೆಗಳು ಸಂಘ ಪರಿವಾರದ ಕಡು ವಿರೋಧಿ ಬಿ.ಕೆ ಹರಿಪ್ರಸಾದ್ ರನ್ನು ಸಿಎಂ ಸಿದ್ದರಾಮಯ್ಯ ಭೇಟಿಯಾದ ನಂತರ ನಡೆದ ಘಟನೆಗಳಾಗಿವೆ.
ಸಂಘಪರಿವಾರದ ನಾಯಕರನ್ನು ಭಯೋತ್ಪಾದಕರ ರೀತಿ ಬಿಂಬಿಸುವ ಕೆಲಸ ಸಿದ್ದರಾಮಯ್ಯ ಸರ್ಕಾರದಿಂದ ನಡೆಯುತ್ತಿದೆ. ಇತ್ತಿಚಿನ ಕೆಲವು ಘಟನೆಗಳು ಸಂಭವಿಸಿದ ನಂತರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಘ ಪರಿವಾರದ ನಾಯಕರು ಮತ್ತು ಕಾರ್ಯಕರ್ತರನ್ನೇ ಗುರಿಯಾಗಿಸಿ ಕೇಸ್ ಜಡಿಯುವ ಕೆಲಸ ಕಾಂಗ್ರೆಸ್ ಸರ್ಕಾರದಿಂದ ನಡೆಯುತ್ತಿರುವುದು ಖಂಡನೀಯ.

ಮಾತ್ರವಲ್ಲ ಸುಹಾಸ್ ಶೆಟ್ಟಿ ಶ್ರದ್ಧಾಂಜಲಿ ಭಾಷಣ ನೆಪದಲ್ಲಿ ಸಂಘ ಪರಿವಾರದ ಹಿರಿಯರಿಗೆ, ಎನ್ ಐ ಎ ತನಿಖೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ ಮುಖಂಡರಿಗೆ ಕೇಸ್ ದಾಖಲಿಸಲಾಗಿದೆ. ಕಾಂಗ್ರೆಸ್ ಸರ್ಕಾರ ಎಸ್ಡಿಪಿಐ ನಾಯಕರ ಬೆದರಿಕೆಗೆ ಹೆದರಿ ಹಿಂದೂ ನಾಯಕ ಶರಣ್ ಪಂಪ್ವೆಲ್ ರನ್ನು ಬಂಧಿಸಿದೆ.
ಆದರೆ ಗೌರವಾನ್ವಿತ ನ್ಯಾಯಲಯ ಕೆಲವೇ ಗಂಟೆಗಳಲ್ಲಿ ಅವರನ್ನು ಬಿಡುಗಡೆ ಮಾಡಿ ನ್ಯಾಯವನ್ನು ಎತ್ತಿ ಹಿಡಿಯುವ ಮೂಲಕ ಸಂಘ ಪರಿವಾರ ವಿರೋಧಿ ಸಿದ್ದರಾಮಯ್ಯ ಸರ್ಕಾರಕ್ಕೆ ಕಪಾಲಮೋಕ್ಷ ಮಾಡಿದಂತಾಗಿದೆ. ಹಿಂದೂ ಕಾರ್ಯಕರ್ತರನ್ನು ಮಾತ್ರ ಟಾರ್ಗೆಟ್ ಮಾಡುವ ಕಾಂಗ್ರೆಸ್ ಸರ್ಕಾರದ ನಡೆ ಖಂಡನೀಯ.

ಇದನ್ನು ತಕ್ಷಣ ನಿಲ್ಲಿಸುವ ಕೆಲಸ ಆಗಬೇಕು ಎಂದು ಆಗ್ರಹಿಸಿದರು.


