ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಶಾಲಾ ಮಕ್ಕಳ ಆರೋಗ್ಯ ಸುರಕ್ಷತೆಯ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ .
ಬೇಸಿಗೆ ರಜೆಯ ಮುಗಿದು ಶಾಲೆಗಳು ಆರಂಭವಾಗುತ್ತಿದ್ದಂತೆಯೇ, ಕೊರೋನಾ ಪ್ರಕರಣಗಳೂ ಕೂಡ ಹೆಚ್ಚಾಗಿದ್ದು ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಮಕ್ಕಳಲ್ಲಿ ಜ್ವರ, ಕೆಮ್ಮು, ನೆಗಡಿ ಕಂಡುಬಂದಲ್ಲಿ ಶಾಲೆಗೆ ಕಳುಹಿಸದೆ, ವಿಶ್ರಾಂತಿ ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. ಜೊತೆಗೆ ಆರೋಗ್ಯ ಇಲಾಖೆ ಶಾಲೆಗಳಿಗೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಶೌಚಾಲಯದಲ್ಲಿ ಸ್ವಚ್ಛತೆ, ಹೈಜಿನ್ ಪಾಲನೆ ಕಡ್ಡಾಯವಾಗಿದ್ದು, ಶಾಲಾ ಸಿಬ್ಬಂದಿಗಳಲ್ಲಿಯೂ ಯಾವುದೇ ಲಕ್ಷಣ ಕಂಡುಬಂದರೆ ತಕ್ಷಣ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಲಾಗಿದೆ.
ಆಯುಕ್ತ ಶಿವಕುಮಾರ್ ಅವರ ಅಧೀಕ್ಷಣೆಯಲ್ಲಿ ಪ್ರಕಟವಾದ ಈ ಗೈಡ್‌ಲೈನ್‌ಗಳ ಪ್ರಕಾರ, ಗುಣಲಕ್ಷಣಗಳಿರುವ ಮಕ್ಕಳನ್ನು ತಕ್ಷಣ ಪೋಷಕರಿಗೆ ತಿಳಿಸಿ ಮನೆಗೆ ಕಳುಹಿಸಬೇಕು.

ಮಾರ್ಗಸೂಚಿಗಳು:
- ಮಕ್ಕಳಲ್ಲಿ ಜ್ವರ, ಕೆಮ್ಮು, ನೆಗಡಿ ಇತ್ಯಾದಿ ಕೊರೋನಾ ಸಂಬಂಧಿತ ಲಕ್ಷಣಗಳು ಕಂಡುಬಂದರೆ ಶಾಲೆಗೆ ಕಳುಹಿಸಬಾರದು.
- ವಿದ್ಯಾರ್ಥಿಗಳು ಸಂಪೂರ್ಣವಾಗಿ ಗುಣಮುಖರಾದ ನಂತರ ಮಾತ್ರ ಅವರನ್ನು ಶಾಲೆಗೆ ಕಳುಹಿಸಬೇಕು.
- ಯಾವುದೇ ಗುಣಲಕ್ಷಣಗಳಿರುವ ವಿದ್ಯಾರ್ಥಿಗಳು ಶಾಲೆಗೆ ಬಂದರೆ ತಕ್ಷಣವೇ ಪೋಷಕರಿಗೆ ಮಾಹಿತಿ ನೀಡಿ ಮನೆಗೆ ಕಳುಹಿಸಬೇಕು.
- ಶಾಲಾ ಸಿಬ್ಬಂದಿಯಲ್ಲಿ ಸಹ ಕೋವಿಡ್ ಲಕ್ಷಣಗಳು ಕಂಡುಬಂದರೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು.
- ಶಾಲೆಗಳಲ್ಲಿ ನಿತ್ಯ ಸ್ವಚ್ಛತೆ ಕಾಪಾಡಬೇಕು. ಕೈ ತೊಳೆಯುವ ವ್ಯವಸ್ಥೆ, ಸ್ಯಾನಿಟೈಸರ್ ಬಳಕೆ ಹಾಗೂ ಸಾಮಾಜಿಕ ಅಂತರ ಪಾಲನೆ ಕಡ್ಡಾಯವಾಗಿದೆ.
- ಶಾಲಾ ಆವರಣದಲ್ಲಿ ಮಾಸ್ಕ್ ಧರಿಸುವುದು ಮತ್ತು ಹೈಜಿನ್ ಪಾಲನೆ ಮಾಡುವಂತೆ ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿಗೆ ಸೂಚಿಸಬೇಕು.



