ಕಾರ್ಕಳ:ಮಂಗಳೂರಿನ ಬಜ್ಪೆಯಲ್ಲಿ ಇತ್ತೀಚಿಗೆ ಭೀಕರವಾಗಿ ಹತ್ಯೆಗಿದ್ದ ಬಜರಂಗದಳ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಖಂಡಿಸಿ ಮತ್ತು ಈ ಹತ್ಯಾ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ (NIA)ಗೆ ವಹಿಸಬೇಕೆಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ – ಬಜರಂಗದಳ ಆಯೋಜಿಸಿದ್ದ ‘ಬಜಪೆ ಚಲೋ’ ಕಾರ್ಯಕ್ರಮದಲ್ಲಿ ಪ್ರಮುಖ ಭಾಷಣ ಮಾಡಿದ್ದ ವಾಗ್ಮಿ ಶ್ರೀಕಾಂತ್ ಶೆಟ್ಟಿ ಕಾರ್ಕಳ ಹಾಗೂ ಕಾರ್ಯಕ್ರಮ ಆಯೋಜಕರ ವಿರುದ್ಧ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಜಪೆ ಠಾಣೆಯ ಕಾನ್‌ಸ್ಟೇಬಲ್ ಚಿದಾನಂದ ಕಟೆ ಅವರು ದೂರು ದಾಖಲಿಸಿದ್ದು, ಬಜಪೆಯಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗಳದ ವತಿಯಿಂದ ಹಮ್ಮಿಕೊಂಡ ಪ್ರತಿಭಟನಾ ಸಭೆಯಲ್ಲಿ ಸುಮಾರು 3 ಸಾವಿರ ಮಂದಿ ಭಾಗವಹಿಸಿದ್ದಾರೆ. ಕಾರ್ಯಕ್ರಮ ಆಯೋಜನೆಗಾಗಲೀ ಅಥವಾ ಧ್ವನಿವರ್ಧಕ ಬಳಸುವುದಕ್ಕಾಗಲೀ ಪೊಲೀಸ್ ಇಲಾಖೆಯಿಂದ ಯಾವುದೇ ಅನುಮತಿಯನ್ನು ಪಡೆದಿಲ್ಲ. ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಬಜಪೆ ಪೇಟೆಯ ಬಸ್ಸು ನಿಲ್ದಾಣಕ್ಕೆ ಬರುವ ಮತ್ತು ನಿಲ್ದಾಣದಿಂದ ಹೊರಹೋಗುವ ರಸ್ತೆಯನ್ನು ಉದ್ದೇಶ ಪೂರ್ವಕವಾಗಿ ಅಕ್ರಮ ಕೂಟ ಕಟ್ಟಿಕೊಂಡು ತಡೆದಿದ್ದಾರೆ. ರಾಜ್ಯ ಹೆದ್ದಾರಿ 67ರ ಇಕ್ಕೆಲಗಳಲ್ಲಿ ಮತ್ತು ಹೆದ್ದಾರಿಯ ಮಧ್ಯದಲ್ಲಿಯೂ ನಿಂತು ವಾಹನಗಳು ಮತ್ತು ಜನ ಸಾಮಾನ್ಯರ ಮುಕ್ತ ಓಡಾಟಕ್ಕೆ ಅಡ್ಡಿಪಡಿಸಿದ್ದಾರೆ. ಸಭೆಯಲ್ಲಿ ಓರ್ವ ಭಾಷಣಕಾರ ಧರ್ಮ-ಧರ್ಮಗಳ ನಡುವೆ ದ್ವೇಷವನ್ನು ಉಂಟುಮಾಡಿ, ಗಲಭೆ ಸೃಷ್ಟಿಸುವ ಹಾಗೂ ಜೀವ ಬೆದರಿಕೆ ಹಾಕುವ ರೀತಿಯಲ್ಲಿ ಪ್ರಚೋದನಕಾರಿಯಾಗಿ ಭಾಷಣ ಮಾಡಿದ್ದಾರೆ. ಭಾಷಣಕಾರರು ಮತ್ತು ಸಂಘಟಕರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ದೂರಿನನ್ವಯ ಕಾರ್ಯಕ್ರಮದಲ್ಲಿ ಶ್ರೀಕಾಂತ್ ಶೆಟ್ಟಿ ಕಾರ್ಕಳ ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ ಎಂಬ ಆರೋಪದ ಮೇಲೆ ಬಜ್ಪೆ ಪೊಲೀಸ್ ಠಾಣೆಯಲ್ಲಿ Crime no-90/25. Section 189(2)-191(2)-285-192,351(2)-351(3)-190Bns,107-109kP ಆಕ್ಟ್ ಅಡಿಯಲ್ಲಿ ದೂರು ದಾಖಲಾಗಿದೆ.




