ವಿಟ್ಲ: ಕರ್ಣಾಟಕ ಬ್ಯಾಂಕ್ ಶಾಖೆಯ ಮುಂಭಾಗದಲ್ಲಿ ನೀರು ತುಂಬಿಕೊಂಡಿದ್ದ ರಸ್ತೆಯ ಹೊಂಡಕ್ಕೆ ಸ್ಕೂಟಿ ಬಿದ್ದು ಸವಾರ ಗಾಯಗೊಂಡ ಘಟನೆ ಮೇ 22ರಂದು ನಡೆದಿದೆ.
ಕಲ್ಲಡ್ಕ-ಕಾಂಞಂಗಾಡ್ ಅಂತಾರಾಜ್ಯ ಹೆದ್ದಾರಿಯಲ್ಲಿರುವ ರಸ್ತೆಯ ಹೊಂಡದಲ್ಲಿ ನೀರು ತುಂಬಿಕೊಂಡು ಕೆರೆಯಂತಾಗಿದ್ದು, ಸ್ಕೂಟಿ ಸವಾರ ರಸ್ತೆಯಲ್ಲಿ ನಿಂತ ನೀರು ಎಂದು ಭಾವಿಸಿ ಸಂಚರಿಸಿದಾಗ ಹೊಂಡಕ್ಕೆ ಬಿದ್ದು ಗಾಯಗೊಂಡಿದ್ದಾರೆ.

ತತ್‌ಕ್ಷಣ ಸ್ಥಳೀಯರು ಸವಾರನನ್ನು ಎತ್ತಿ ಅಪಾಯದಿಂದ ಪಾರು ಮಾಡಿದ್ದಾರೆ.
ಈ ರಸ್ತೆಯ ಹೊಂಡದಿಂದ ಕೃತಕ ಪ್ರವಾಹ ಉಂಟಾಗುತ್ತಿದ್ದು, ಎರಡು ವರ್ಷದಿಂದ ಈ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. 200 ಮೀಟರ್ ದೂರದ ರಸ್ತೆ ಅಭಿವೃದ್ಧಿಯಾಗಿಲ್ಲ. ಪರಿಣಾಮವಾಗಿ ಚರಂಡಿ ಸಮರ್ಪಕವಾಗಿಲ್ಲ, ಮಳೆ ಬಂದ ತಕ್ಷಣ ನೀರು ರಸ್ತೆಯಲ್ಲಿ ನಿಲ್ಲುತ್ತಿದ್ದು, ಆಗಾಗ ಜಲ್ಲಿ ಹಾಕಿ ಹೊಂಡ ಮುಚ್ಚಿದರೂ ಶಾಶ್ವತ ಪರಿಹಾರ ಸಿಕ್ಕಿಲ್ಲ ಎಂದು ತಿಳಿದು ಬಂದಿದೆ.



