Breaking
21 Mar 2026, Sat

ಯಕ್ಷಮಂಗಳ ಪ್ರಶಸ್ತಿಗೆ ಡಾ.ಬನಾರಿ, ಪ್ರೊ.ಎಂ.ಎಲ್‌ಸಾಮಗ, ಸದಾಶಿವ ಶೆಟ್ಟಿಗಾರ್‌ ಆಯ್ಕೆ

ಉಳ್ಳಾಲ: ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ.ದಯಾನಂದ ಪೈ ಮತ್ತು ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ 2024ನೇ ಸಾಲಿನ ಯಕ್ಷಮಂಗಳ ಪ್ರಶಸ್ತಿಗೆ ಯಕ್ಷಗಾನ ರಂಗದ ಹಿರಿಯ ಅರ್ಥಧಾರಿ, ವಿದ್ವಾಂಸ ಡಾ.ರಮಾನಂದ ಬನಾರಿ ಕಾಸರಗೋಡು, ಹಿರಿಯ ಯಕ್ಷಗಾನ ಕಲಾವಿದ,‌ ವಿದ್ವಾಂಸ ಪ್ರೊ.ಎಂ.ಎಲ್.ಸಾಮಗ, ತೆಂಕುತಿಟ್ಟು ಯಕ್ಷಗಾನದ ಹಿರಿಯ ಬಣ್ಣದ ವೇಷಧಾರಿ ಸದಾಶಿವ ಶೆಟ್ಟಿಗಾರ್ ಸಿದ್ಧಕಟ್ಟೆ ಆಯ್ಕೆಯಾಗಿದ್ದಾರೆ.

ಯಕ್ಷಮಂಗಳ ಕೃತಿ ಪ್ರಶಸ್ತಿಗೆ ಲೇಖಕ ಶಿರಸಿಯ ಅಶೋಕ ಹಾಸ್ಯಗಾರ ಅವರ ‘ದಶರೂಪಕಗಳ ದಶಾವತಾರ’ ಕೃತಿ ಆಯ್ಕೆಯಾಗಿದ್ದು, ಯಕ್ಷಮಂಗಳ ಪ್ರಶಸ್ತಿಯು ₹ 25 ಸಾವಿರ ‌ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ ಮತ್ತು ಸನ್ಮಾನಗಳನ್ನು ಒಳಗೊಂಡಿದೆ. ಯಕ್ಷಮಂಗಳ ಕೃತಿ ಪ್ರಶಸ್ತಿಯು ₹10 ಸಾವಿರ ನಗದು,‌ ಪ್ರಶಸ್ತಿ, ಸ್ಮರಣಿಕೆಗಳನ್ನು ಒಳಗೊಂಡಿರುತ್ತದೆ.

ಜಾನಪದ ವಿದ್ವಾಂಸ ಪ್ರೊ.ಕೆ.ಚಿನ್ನಪ್ಪ ಗೌಡ ಅವರ ಅಧ್ಯಕ್ಷತೆಯಲ್ಲಿ ಪ್ರೊ.ಪಾದೆಕಲ್ಲು ವಿಷ್ಣುಭಟ್, ಯಕ್ಷಗಾನ ಸಂಘಟಕ ಮುರಲೀ ಕಡೇಕಾರ್, ಕೇಂದ್ರದ ನಿರ್ದೆಶಕ ಧನಂಜಯ ಕುಂಬ್ಳೆ ಅವರನ್ನು ಒಳಗೊಂಡಿರುವ ಸಮಿತಿಯು ಸರ್ವಾನುಮತದಿಂದ ಈ ಆಯ್ಕೆ ಮಾಡಿದೆ.

ಜೂನ್‌ನಲ್ಲಿ ಮಂಗಳೂರು ವಿವಿ ಕುಲಪತಿ ಪ್ರೊ.ಪಿ‌ಎಲ್.ಧರ್ಮ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕುಲಸಚಿವ ಕೆ.ರಾಜು ಮೊಗವೀರ, ಕೇಂದ್ರದ ನಿರ್ದೇಶಕ ಧನಂಜಯ ಕುಂಬ್ಳೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *