Breaking
25 Jul 2026, Sat

ಭಾರೀ ಮಳೆ-ಬಿರುಗಾಳಿ: ಚಲಿಸುತ್ತಿದ್ದ ಬೈಕ್ ಮೇಲೆ ಉರುಳಿದ ಮರ, ಸವಾರ ಪ್ರಾಣಾಪಾಯದಿಂದ ಪಾರು

ಬೆಳ್ತಂಗಡಿ: ಭಾರೀ ಮಳೆ ಹಾಗೂ ಬಿರುಗಾಳಿಯ ಪರಿಣಾಮ ರಸ್ತೆ ಬದಿಯ ಮರೊಂದು ಚಲಿಸುತ್ತಿದ್ದ ಬೈಕ್ ಮೇಲೆ ಉರುಳಿ ಬಿದ್ದ ಘಟನೆ ಶುಕ್ರವಾರ ಶಿಶಿಲ ಸಮೀಪದ ಬರ್ಗುಳದಲ್ಲಿ ನಡೆದಿದೆ. ಅದೃಷ್ಟವಶಾತ್ ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾರೆ.


ಬೈಕ್ ಸವಾರರನ್ನು ಶಿಶಿಲ ಗ್ರಾಮದ ದೇಣೋಡಿ ನಿವಾಸಿ ರತೀಶ್ ಪೂಜಾರಿ ಎಂದು ಗುರುತಿಸಲಾಗಿದೆ. ಅವರು ಕೊಕ್ಕಡದಿಂದ ಶಿಶಿಲ ಕಡೆಗೆ ಬೈಕ್ನಲ್ಲಿ ತೆರಳುತ್ತಿದ್ದ ವೇಳೆ, ರಸ್ತೆ ಬದಿಯಲ್ಲಿದ್ದ ಮರ ಭಾರೀ ಮಳೆ ಮತ್ತು ಬಿರುಗಾಳಿಯಿಂದ ಬೇರು ಸಮೇತ ಉರುಳಿ ಬೈಕ್ ಮೇಲೆ ಬಿದ್ದಿದೆ.


ಮರವು ವಿದ್ಯುತ್ ತಂತಿಗಳ ಮೇಲೂ ಬಿದ್ದ ಪರಿಣಾಮ ಆ ಪ್ರದೇಶದಲ್ಲಿ ಕೆಲಕಾಲ ವಿದ್ಯುತ್ ಸರಬರಾಜು ಸ್ಥಗಿತಗೊಂಡಿತು. ಅಲ್ಲದೆ, ವಾಹನ ಸಂಚಾರಕ್ಕೂ ತಾತ್ಕಾಲಿಕ ಅಡಚಣೆ ಉಂಟಾಯಿತು.


ಘಟನೆಯ ಮಾಹಿತಿ ತಿಳಿದ ತಕ್ಷಣ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಪಡೆಯ ಅರಸಿನಮಕ್ಕಿ–ಶಿಶಿಲ ಘಟಕದ ಸದಸ್ಯರು ಹಾಗೂ ಸ್ಥಳೀಯ ನಿವಾಸಿಗಳು ಸ್ಥಳಕ್ಕೆ ಧಾವಿಸಿ ಉರುಳಿದ ಮರವನ್ನು ತೆರವುಗೊಳಿಸಿ ವಾಹನ ಸಂಚಾರವನ್ನು ಸುಗಮಗೊಳಿಸಿದರು.


ನಂತರ ಪಂಚಾಯತ್ ಸಿಬ್ಬಂದಿ ಹಾಗೂ ಮೆಸ್ಕಾಂನ ಪವರ್ಮ್ಯಾನ್ ಸಂತೋಷ್ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಂಡರು.

Leave a Reply

Your email address will not be published. Required fields are marked *