ಬಂಟ್ವಾಳ: ಮನೆ ಮನೆಗೆ ತೆರಳಿ ತ್ಯಾಜ್ಯ ಸಂಗ್ರಹಿಸಲಾಗುತ್ತಿದೆಯಾದರೂ ತಾಲೂಕಿನ ರಸ್ತೆ ಬದಿಯ ಅಲ್ಲಲ್ಲಿ ಕಸದ ರಾಶಿ ಬಿದ್ದಿದ್ದು ಈ ಬಗ್ಗೆ ದ.ಕ. ಜಿಲ್ಲಾ ಪಂಚಾಯತ್ ಸ್ವಚ್ಛ ಭಾರತ್ ಮಿಷನ್ ವಿಶೇಷ ಗಮನ ಹರಿಸಿ ರಸ್ತೆ ಬದಿ ತ್ಯಾಜ್ಯ ಎಸೆಯುವ ಕಾರಣ ತಿಳಿಯಲು ಮುಂದಾಗಿದೆ.
ಕಸ ಎಸೆಯುವ ಪ್ರಮುಖ ಜಾಗಗಳನ್ನು ಗುರುತಿಸಿ ಅಲ್ಲಿ ಕಾವಲುಗಾರರನ್ನು ನೇಮಿಸಿ, ತ್ಯಾಜ್ಯ ಎಸೆಯುವ ಕಾರಣ ತಿಳಿಯುವ ಧನಾತ್ಮಕ ಚಿಂತನೆ ಮಾಡಿದ್ದು, ಜೊತೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ, ಆಡಳಿತ ವ್ಯವಸ್ಥೆಯಲ್ಲಿ ತಪ್ಪುಗಳಿದ್ದರೆ ಅದನ್ನು ಸರಿಪಡಿಸುವ ಇರಾದೆಯನ್ನು ವ್ಯಕ್ತಪಡಿಸಿದೆ.
ಈ ಬಗ್ಗೆ ಚರ್ಚೆ ನಡೆದಿದ್ದು ಒಂದು ವೇಳೆ ಪರಿಹಾರಕ್ಕೆ ಪಂಚಾಯತ್‌ಗಳ ಅನುದಾನ ಸಾಲದೇ ಇದ್ದರೆ ಒಂದಷ್ಟು ಕಂಪೆನಿಗಳ ಸಿಎಸ್‌ಆರ್ ಅನುದಾನಕ್ಕೆ ಪ್ರಯತ್ನಿಸುವ ಬಗ್ಗೆ ನಿರ್ಧರಿಸಲಾಗಿದೆ.
ರಾ.ಹೆ.75ರ ವ್ಯಾಪ್ತಿಯಲ್ಲಿ ಬರುವ ಬಂಟ್ವಾಳ ತಾಲೂಕಿನ ಕಳ್ಳಿಗೆ, ತುಂಬೆ, ಪುದು, ಅಡ್ಯಾರ್ ಗ್ರಾಪಂಗಳಲ್ಲಿ ಇದನ್ನು ಪ್ರಾಯೋಗಿಕವಾಗಿ ಆರಂಭಿಸಲಾಗುತ್ತಿದೆ.
4 ಪಂಚಾಯತ್ ವ್ಯಾಪ್ತಿಯಲ್ಲಿ ಹೆಚ್ಚಾಗಿ ಯಾವ ಸ್ಥಳದಲ್ಲಿ ತ್ಯಾಜ್ಯ ಎಸೆಯಲಾಗುತ್ತದೆಯೋ ಅಲ್ಲಿ ಕಾವಲುಗಾರರನ್ನು ನೇಮಿಸಲಾಗುತ್ತದೆ. ಅವರು ಬೆಳಗ್ಗೆ 5ರಿಂದ 8 ಹಾಗೂ ರಾತ್ರಿ 8ರಿಂದ 10 ಗಂಟೆಯವರೆಗೆ ನಿಂತು ಕಸ ಎಸೆಯುವವರನ್ನು ಮಾತನಾಡಿಸಿ ಕಾರಣ ತಿಳಿಯುವ ಪ್ರಯತ್ನ ನಡೆಸಬೇಕು.
ಈ ಕಾರ್ಯಕ್ಕೆ ಪಂಚಾಯತ್‌ಗಳು 5 ಮಂದಿ ಹಾಗೂ ಹಸಿರು ದಳ 5 ಮಂದಿಯನ್ನು ನೀಡುವುದಕ್ಕೆ ಒಪ್ಪಿಗೆ ಸೂಚಿಸಿದೆ. 2 ತಿಂಗಳು ಈ ಕಾರ್ಯಾಚರಣೆ ನಡೆಯಲಿದೆ.
ನಾಲ್ಕು ಪಂಚಾಯತ್‌ಗಳಲ್ಲಿ ಈ ಯೋಜನೆ ಯಶಸ್ಸು ಪಡೆದರೆ ಬೇರೆ ಕಡೆಗೆ ವಿಸ್ತರಿಸಬಹುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಜಯಲಕ್ಷ್ಮೀ ರಾಯಕೊಡ ತಿಳಿಸಿದ್ದಾರೆ.
ಬಂಟ್ವಾಳ ತಾ.ಪಂ.ಇ ಒ ಸಚಿನ್‌ಕುಮಾರ್, ಮಂಗಳೂರು ತಾ.ಪಂ.ಇ ಒ ಮಹೇಶ್ ಹೊಳ್ಳ, ಕಳ್ಳಿಗೆ ಗ್ರಾ.ಪಂ.ಅಧ್ಯಕ್ಷ ಪುರುಷೋತ್ತಮ ಕೊಟ್ಟಾರಿ ಮಾಡಂಗೆ, ಅಡ್ಯಾರ್ ಗ್ರಾ.ಪಂ.ಅಧ್ಯಕ್ಷ ಅಬ್ದುಲ್ ಜಲೀಲ್, ತುಂಬೆ ಗ್ರಾ.ಪಂ.ಉಪಾಧ್ಯಕ್ಷ ಗಣೇಶ್ ರಾಮಲ್‌ಕಟ್ಟೆ, ಹಸುರು ದಳದ ನಾಗರಾಜ್ ಆರ್.ಅಂಚನ್, ಜಿಲ್ಲಾ ಸ್ವಚ್ಛ ಭಾರತ್ ಮಿಷನ್(ಗ್ರಾ)ನ ಸಮಾಲೋಚಕರು ಉಪಸ್ಥಿತರಿದ್ದರು.


